ಹೈದರಾಬಾದ್: ಕೇಂದ್ರ ತಂದಿರುವ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಈ ಪ್ರತಿಭಟನೆಯ ಅಗ್ನಿ ಈಗ ಹೈದರಾಬಾದ್‌ಗೂ ತಟ್ಟಿದೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಯುವಕರು ರೈಲಿಗೆ ಬೆಂಕಿ ಹಚ್ಚಿ ಧರಣಿ ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ, 8 ಮಂದಿಗೆ ಬುಲೆಟ್ ತಗುಲಿದೆ ಎಂದು ವರದಿಯಾಗಿದೆ.
ರೈಲ್ವೆ ಹಳಿಗಳ ಮೇಲೆ ಪಾರ್ಸೆಲ್ ಲಗೇಜ್ ಸುಟ್ಟು ಪ್ರತಿಭಟಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ಹೊಸ ಸೇನಾ ಯೋಜನೆಯನ್ನು ಹಿಂತೆಗೆದುಕೊಂಡು ಮೊದಲಿನ ರೀತಿಯಲ್ಲೇ ಸೇನಾ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಉಗ್ರರೂಪದ ಪ್ರತಿಭಟನೆ ಕೈಗೊಂಡರು.
ಈ ವೇಳೆ ಯುವಕರ ಒಂದು ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಹೀಗಾಗಿ ಪೊಲೀಸರು ಯುವಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಭಯಭೀತಗೊಂಡ ಯುವಕರು ಓಡಿಹೋಗಲು ಯತ್ನಿಸಿದ್ದಾರೆ. ನೂಕು ನುಗ್ಗಲು ಆದ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ.