ಜೈಪುರ (ರಾಜಸ್ಥಾನ): ಜೈಪುರದಲ್ಲಿ 12 ವರ್ಷದ ಬಾಲಕನನ್ನು ಬಲವಂತವಾಗಿ ಬಾಲ ಕಾರ್ಮಿಕನನ್ನಾಗಿ ಬಳಸಿಕೊಂಡಿರುವ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಸ್ತ್ರಿನಗರ ಠಾಣೆಯ ಎಸ್ಹೆಚ್ಒ (ಸ್ಟೇಶನ್ ಹೌಸ್ ಆಫಿಸರ್) ದಿಲೀಪ್ ಸಿಂಗ್ ಈ ವಿಷಯ ತಿಳಿಸಿದ್ದಾರೆ. ಅಲ್ಲದೇ ಬಂಧಿತ ಮಹಿಳೆಯ ಪತಿ ವಿರುದ್ಧ ಬಾಲಕನ ಮೇಲೆ ಅಸಹಜ ಲೈಂಗಿಕ ಕ್ರಿಯೆ ಎಸಗಿರುವ ಆರೋಪ ಕೇಳಿ ಬಂದಿದೆ.
ಪ್ರಕರಣ ಸಂಬಂಧ ಪತ್ನಿಯನ್ನು ಬಂಧಿಸಲಾಗಿದ್ದು, ಪತಿ ತಲೆಮರೆಸಿಕೊಂಡಿದ್ದಾನೆ. 12 ವರ್ಷದ ಬಾಲಕ ಇದೀಗ ಎನ್ಜಿಒ ರಕ್ಷಣೆಯಲ್ಲಿದ್ದಾನೆ. ಆರೋಪಿಗಳನ್ನು ಮೊಹಮ್ಮದ್ ರಿಯಾಜ್ ಮತ್ತು ರೂಹಿ ಪರ್ವೀನ್ ಎಂದು ಗುರುತಿಸಲಾಗಿದೆ.
ಬಾಲಕನಿಗೆ ಕಿರುಕುಳ: ಏಳು ತಿಂಗಳ ಹಿಂದೆ ಈ ದಂಪತಿ ಬಾಲಕನನ್ನು ಬಿಹಾರದ ದರ್ಬಂಗಾ ಜಿಲ್ಲೆಯಿಂದ ಬಳೆ ತಯಾರಿಕೆ ಕೆಲಸಕ್ಕಾಗಿ ಜೈಪುರಕ್ಕೆ ಕರೆತಂದಿದ್ದರು. ಬಲವಂತವಾಗಿ ಆತನಿಂದ ಕೆಲಸ ಕೂಡಾ ಮಾಡಿಸಿಕೊಂಡಿದ್ದರು. ಮನೆಗೆ ಬೀಗ ಹಾಕಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಬಾಲಕನನ್ನು ಮನೆಯಿಂದ ಹೊರಗೆ ಬರಲು ಬಿಡದೇ, ಆತನ ಮೇಲೆ ನಿರಂತರ ನಿಗಾ ಇರಿಸಿದ್ದರಂತೆ. ಕೆಲಸ ಕಡಿಮೆಯಾದರೆ ದಂಪತಿಯು ಬಾಲಕನಿಗೆ ಹೊಡೆಯುತ್ತಿದ್ದರು, ಚಿತ್ರಹಿಂಸೆ ಕೊಡುತ್ತಿದ್ದರು. ಅಲ್ಲದೇ ಬಾಲಕ ಮನೆಯಿಂದ ಹೊರಹೋಗದಂತೆ ಆರೋಪಿ ಮೊಹಮ್ಮದ್ ರಿಯಾಜ್, ಬಾಲಕನ ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ಎಂದು ಬಾಲಕನನ್ನು ರಕ್ಷಿಸಿರುವ ಮಕ್ಕಳ ಸಹಾಯವಾಣಿಯ ಸದಸ್ಯರಾದ ಸುಮನ್ ಸಿಂಗ್ ಹೇಳಿದ್ದಾರೆ.