ವಿಜಯವಾಡ (ಆಂಧ್ರಪ್ರದೇಶ): ಸಾವಿರಾರು ಜನರಿಗೆ ಲಕ್ಷಗಟ್ಟಲೇ ಹಣ ಗಳಿಸುವ ಆಮಿಷವೊಡ್ಡಿ ವಂಚಿಸಿರುವ ಆರೋಪದ ಮೇಲೆ ಇಬ್ಬರನ್ನು ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರು ಮೂಲದ ಸಹೋದರರಾದ ವೇಣುಗೋಪಾಲ್ ಮತ್ತು ಕಿರಣ್ ಎಂದು ಗುರುತಿಸಲಾಗಿದೆ.
ಬಂಧಿತರು ಸಂಕಲ್ಪ್ ಸಿದ್ಧಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕಂಪನಿಯು ಪಾರ್ಟ್ಟೈಮ್ ಕೆಲಸ ಮಾಡಿ, ಲಕ್ಷಗಟ್ಟಲೇ ಹಣ ಗಳಿಸಿ ಎಂದು ಜಾಹೀರಾತು ನೀಡಿತ್ತು. ಜೊತೆಗೆ ಜನರಿಗೆ 1 ಲಕ್ಷ ಪಾವತಿಸಿದರೆ 10 ತಿಂಗಳಲ್ಲಿ 3 ಲಕ್ಷ ಗಳಿಸುವ ಆಮಿಷವನ್ನು ಒಡ್ಡಿತ್ತು. ಈ ಬಗ್ಗೆ ಸಂತ್ರಸ್ತರಿಂದ ಬಂದ ದೂರಿನಂತೆ, ಖಾಸಗಿ ಕಂಪನಿಯ ವಂಚನೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಇನ್ನು, ಈ ಕಂಪನಿಯು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಸುಮಾರು 15 ಸಾವಿರ ಸದಸ್ಯರನ್ನು ನೇಮಿಸಿಕೊಂಡಿದ್ದು, ಇವರಿಂದ ಕೋಟ್ಯಂತರ ರೂ. ವಸೂಲಿ ಮಾಡಿದೆ. ಅಲ್ಲದೆ ಕಂಪನಿಯ ಆ್ಯಪ್ ಮೂಲಕವೂ ಹಲವು ಮಂದಿಯನ್ನು ನೇಮಕ ಮಾಡಿಕೊಂಡಿದೆ ಎಂದು ಪೊಲೀಸರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈ ಕಂಪನಿಯು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶಾಖೆಗಳನ್ನು ಹೊಂದಿದೆ. ಬಂಧಿತ ವೇಣುಗೋಪಾಲ್ ಈ ಕಂಪನಿಯ ಮ್ಯಾನೇಜರ್ ಆಗಿದ್ದು, ಈ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ಪ್ರಕರಣ ಸಂಬಂಧ ಕಂಪನಿಯ ದಾಖಲೆಗಳು ಮತ್ತು ಕಂಪ್ಯೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :ಲಕ್ಷ ಹೂಡಿಕೆ ಮಾಡಿ ಕೋಟಿ ಪಡೆಯುವ ಆಮಿಷ: ತಲೆ ಮರೆಸಿಕೊಂಡ ಪ್ರಮುಖ ಆರೋಪಿ