ಚೆನ್ನೈ : ತಮಿಳುನಾಡಿನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 2006ರಲ್ಲಿ 76 ಹುಲಿಗಳಿದ್ದು, ಪ್ರಸ್ತುತ ಇವುಗಳ ಸಂಖ್ಯೆ 306 ಆಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಶನಿವಾರ ಜಾಗತಿಕ ಹುಲಿ ದಿನದ ಸಂದರ್ಭದಲ್ಲಿ ಹುಲಿಗಳ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
2018 ರ ಕೊನೆಯಲ್ಲಿ ನಡೆದಿದ್ದ ಹುಲಿ ಗಣತಿಯಲ್ಲಿ ತಮಿಳುನಾಡು ಅರಣ್ಯಗಳಲ್ಲಿ 264 ಹುಲಿಗಳಿರುವುದು ಕಂಡು ಬಂದಿತ್ತು. ಆದರೆ ಇತ್ತೀಚಿನ ಗಣತಿಯಲ್ಲಿ ಈ ಸಂಖ್ಯೆ 306 ಕ್ಕೆ ತಲುಪಿದೆ. ಅನಮಲೈ ಹುಲಿ ಸಂರಕ್ಷಿತ ಪ್ರದೇಶ, ಕಲಕ್ಕಾಡ್ -ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ (KMTR), ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (MTR), ಶ್ರೀವಿಲ್ಲಿಪುತ್ತೂರ್ ಮೇಗಮಲೈ ಹುಲಿ ಸಂರಕ್ಷಿತ ಪ್ರದೇಶ (SMTR) ಮತ್ತು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ (STR) ಹೀಗೆರಾಜ್ಯವು ಐದು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.
ತಮಿಳುನಾಡಿನ ಐದು ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (MTR) ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಜನಗಣತಿಯ ಪ್ರಕಾರ, ಎಂಟಿಆರ್‌ನಲ್ಲಿ ವಾಸಿಸುವ ಹುಲಿಗಳ ಸಂಖ್ಯೆ 114 ಆಗಿದೆ. ಇನ್ನು 167 ಹುಲಿಗಳು ಈ ಮೀಸಲು ಪ್ರದೇಶದ ಒಳಗೆ ಮತ್ತು ಹೊರಗೆ ಚಲಿಸುತ್ತಿರುತ್ತವೆ. ಅರಣ್ಯ ಮೀಸಲು ವ್ಯಾಪ್ತಿ ಹೆಚ್ಚಳ, ಬೇಟೆ ತಡೆ ಕ್ರಮಗಳು ಮತ್ತು ಬೇಟೆಯ ವಿರುದ್ಧ ಜಾಗೃತಿ ಮುಂತಾದ ಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.