ಲಖನೌ (ಉತ್ತರ ಪ್ರದೇಶ): ಇಂದು ಹೆಣ್ಣು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ನೇಮಕ ಮಾಡಿಕೊಂಡಿದ್ದ 26 ಮಹಿಳಾ ಚಾಲಕರ ಪೈಕಿ ಪ್ರಿಯಾಂಕಾ ಶರ್ಮಾ ಅವರು ತಮ್ಮ ಜೀವನದ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ರಾಜ್ಯದ ಮೊದಲ ಸರ್ಕಾರಿ ಬಸ್ ಚಾಲಕಿ ಎನಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕಾ, 'ಅತಿಯಾದ ಕುಡಿತದಿಂದ ಎರಡೂ ಕಿಡ್ನಿ ವಿಫಲಗೊಂಡು ನನ್ನ ಪತಿ ನಿಧನರಾದರು. ಗಂಡನ ಮರಣದ ನಂತರ ನನ್ನ ಇಬ್ಬರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಬಳಿಕ ನಾನು ಕೆಲಸಕ್ಕಾಗಿ ದೆಹಲಿಗೆ ಸ್ಥಳಾಂತರವಾದೆ. ಆರಂಭದಲ್ಲಿ ನನಗೆ ಕಾರ್ಖಾನೆಯಲ್ಲಿ ಸಹಾಯಕಿಯ ಕೆಲಸ ಸಿಕ್ಕಿತ್ತು.
ನಂತರ ಚಾಲಕಿಯಾಗಿ ಸೇರಿಕೊಂಡೆ. ಡ್ರೈವಿಂಗ್ ಕೋರ್ಸ್ ತೆಗೆದುಕೊಂಡ ನಂತರ ನಾನು ಮುಂಬೈಗೆ ತೆರಳಿದೆ, ಬಳಿಕ ಬಂಗಾಳ ಮತ್ತು ಅಸ್ಸೋಂನಂತಹ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿದೆ. ಮಹಿಳಾ ಬಸ್ ಚಾಲಕಿಯಾಗಿ ಉತ್ತಮ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದರು.