ನವದೆಹಲಿ: ಉತ್ತರ ಪ್ರದೇಶದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದೆ. ಮುಂದಿನ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವತಿಯರಿಗೆ ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಾನಿಕ್ ಸ್ಕೂಟಿ ನೀಡುವುದಾಗಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದ್ದಾರೆ.
ಈ ಬಗ್ಗೆ ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಕೆಲವು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದೇನೆ, ಅಧ್ಯಯನ ಮಾಡಲು ಮತ್ತು ಭದ್ರತೆಗಾಗಿ ಸ್ಮಾರ್ಟ್ ಫೋನ್ ಬೇಕು ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಇಂಟರ್‌ಮೀಡಿಯಟ್ ಉತ್ತೀರ್ಣರಾದವರಿಗೆ ಸ್ಮಾರ್ಟ್ ಫೋನ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಸ್ಕೂಟಿ ನೀಡುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಪ್ರಣಾಳಿಕೆ ಸಮಿತಿ ಇದಕ್ಕೆ ಒಪ್ಪಿಗೆ ನೀಡಿರುವುದು ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ ಘೋಷಿಸಿದ್ದರು. ಇದೇ ವೇಳೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಯಸುವ ಎಲ್ಲಾ ಮಹಿಳೆಯರು, ಮುಂದೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಾಗತವಿದೆ ಎಂದಿದ್ದರು. ಸ್ಪರ್ಧೆ ಬಯಸುವ ಆಸಕ್ತ ಮಹಿಳೆಯರು ನವೆಂಬರ್ 15 ರವರೆಗೆ ಅರ್ಜಿಯನ್ನು ನೀಡಬಹುದು ಎಂದು ಮಾಧ್ಯಮಗೋಷ್ಠಿಯಲ್ಲಿ ಘೋಷಿಸಿದ್ದರು.