ಲಖನೌ(ಉತ್ತರಪ್ರದೇಶ) :ಉತ್ತರಪ್ರದೇಶ ಚುನಾವಣಾ ಕಣ ಈಗಾಗಲೇ ರಂಗೇರಿದೆ. ಬಿಜೆಪಿ,ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕಿಳಿದು ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಇಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ.
BJP ಕಾರ್ಯಕರ್ತರಿಗೆ ಪ್ರಣಾಳಿಕೆ ನೀಡಲು ರೋಡ್ಶೋ ನಿಲ್ಲಿಸಿದ ಪ್ರಿಯಾಂಕಾ! ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಲಿಘರ್ನಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಪ್ರಣಾಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ:Watch : ಹೈದರಾಬಾದ್ ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ತಿಂದ ನಮೋ..
ರೋಡ್ ಶೋ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಪರ ಜಯಘೋಷ ಹಾಕಿದ್ದು, ಈ ವೇಳೆ ತಮ್ಮ ರೋಡ್ ಶೋ ನಿಲ್ಲಿಸಿದ ಪ್ರಿಯಾಂಕಾ ಪಕ್ಷದ ಪ್ರಣಾಳಿಕೆ ಪತ್ರ ಅವರ ಕೈಗೆ ನೀಡಿದ್ದಾರೆ. ತದನಂತರ ಮುಗುಳುನಗೆಯಿಂದಲೇ ಮುಂದೆ ಸಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಯುವಕರಿಗೋಸ್ಕರ ಪ್ರತ್ಯೇಕ ಪ್ರಣಾಳಿಕೆ ರಿಲೀಸ್ ಮಾಡಿ, ಅನೇಕ ಭರವಸೆ ನೀಡಿದೆ. ಉತ್ತರಪ್ರದೇಶದ 403 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಬರುವ 10ರಂದು ನಡೆಯಲಿದೆ.
ಕಳೆದ ಎರಡು ದಿನಗಳ ಹಿಂದೆ ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮುಖಾಮುಖಿಯಾಗಿದ್ದರು. ಈ ವೇಳೆ ಪರಸ್ಪರ ಕೈಬೀಸಿ,ಮುಗುಳುನಗೆ ಬೀರಿದ ಘಟನೆಯೂ ನಡೆದಿತ್ತು.