ಲಖನೌ, ಉತ್ತರಪ್ರದೇಶ:ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳ ಟೀಕಾಪ್ರಹಾರಗಳು ಸದ್ದು ಮಾಡುತ್ತಿವೆ. ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
'ಸಿಎಂ ಯೋಗಿ ಆದಿತ್ಯನಾಥ್ ಶೇಕಡಾ 80 ಮತ್ತು ಶೇಕಡಾ 20ರ ಬಗ್ಗೆ ಮಾತನಾಡುತ್ತಾರೆ. ಆದರೆ, ಶೇಕಡಾ 99 ಮತ್ತು ಶೇಕಡಾ 1ರ ಬಗ್ಗೆ ಮಾತನಾಡಬೇಕಿದೆ. ಉತ್ತರ ಪ್ರದೇಶ ಸೇರಿದಂತೆ ಇಡೀ ದೇಶದಲ್ಲಿ ಕೇಂದ್ರ ಸರ್ಕಾರದಿಂದ ಕೆಲವೇ ಕೆಲವೇ ಸ್ನೇಹಿತರು ಮತ್ತು ಉದ್ಯಮಿಗಳು ಮಾತ್ರ ಸೌಲಭ್ಯ ಪಡೆಯುತ್ತಿದ್ದಾರೆ.
ಇನ್ನುಳಿದವರು ನೋವನ್ನು ಮಾತ್ರ ಅನುಭವಿಸುತ್ತಿದ್ದಾರೆ. ಶೇಕಡಾ 99ರಷ್ಟು ಮಂದಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಶೇಕಡಾ 1ರಷ್ಟು ಮಂದಿ ಮಾತ್ರ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಶೇಕಡಾ 80 ಮತ್ತು ಶೇಕಡಾ 20 ನಡುವೆ ಚುನಾವಣೆ ನಡೆಯಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಧರ್ಮದ ಆಧಾರದ ಮೇಲೆ ಅವರು ಈ ಹೇಳಿಕೆ ನೀಡಿದ್ದರೆಂಬುದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಉತ್ತರ ಪ್ರದೇಶದಲ್ಲಿರುವ ನಿರುದ್ಯೋಗಿಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಸರ್ಕಾರ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಬಜೆಟ್ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಉತ್ತರಪ್ರದೇಶದ ಪ್ರಗತಿಗೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದು ಏಕೆ? ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.