ಲಕ್ನೋ(ಉತ್ತರಪ್ರದೇಶ):ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿಯಾಗಿಯೇ ತಯಾರಿ ನಡೆಸುತ್ತಿದೆ. ವಿಶೇಷವೆಂದರೆ ಕಾಂಗ್ರೆಸ್ ಈ ಬಾರಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದು, ಅವರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರಪ್ರದೇಶ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ ಇಂದು ಮಹಿಳೆಯರಿಗಾಗಿಯೇ ರಚಿಸಲಾಗಿರುವ 'ಶಕ್ತಿ ವಿಧಾನ್' ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಗೃಹಿಣಿಯರು, ಕಾಲೇಜು ವಿದ್ಯಾರ್ಥಿನಿಯರು, ಆಶಾ ಹಾಗೂ ಅಂಗನವಾಡಿ ಸಹೋದರಿಯರು, ಸ್ವಸಹಾಯ ಸಂಘಗಳ ಸಹೋದರಿಯರು, ಶಿಕ್ಷಕಿಯರು ಹಾಗೂ ವೃತ್ತಿಪರ ಮಹಿಳೆಯರ ಧ್ವನಿಯನ್ನು ಈ ಶಕ್ತಿ ವಿಧಾನ್ ಪ್ರಣಾಳಿಕೆ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಮಹಿಳೆಯರಿಗೆ ಇರುವ ಮೀಸಲಾತಿ ಕಾಗದದ ಮೇಲೆ ಮಾತ್ರ ಇರಬಾರದು. ಹಾಗಾಗಿ ರಾಜಕೀಯದಲ್ಲಿ ಹೆಚ್ಚಾಗಿ ಸ್ತ್ರೀಯರು ಭಾಗವಹಿಸಬೇಕು. ಇದಕ್ಕಾಗಿ ಕಾಂಗ್ರೆಸ್ ನಾರಿಯರಿಗೆ ಈ ಬಾರಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತದೆ ಎಂದು ಭರವಸೆ ನೀಡಿದರು.
ಉತ್ತರ ಪ್ರದೇಶದ ಒಟ್ಟಾರೆ ದುಡಿಯುವ ವರ್ಗದಲ್ಲಿ ಮಹಿಳೆಯರು ಕೇವಲ ಶೇ.9.4 ರಷ್ಟಿದ್ದಾರೆ. ಇದನ್ನು ಹೆಚ್ಚಿಸಲು ಮತ್ತು ಲಿಂಗ ಅಸಮಾನತೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ 20 ಲಕ್ಷ ಉದ್ಯೋಗಗಳಲ್ಲಿ ಶೇಕಡಾ 40 ರಷ್ಟನ್ನು ಮಹಿಳೆಯರಿಗೆ ಮೀಸಲಿಡುತ್ತದೆ. ಪಂಚಾಯತ್ ರಾಜ್‌ನಲ್ಲಿ ಶೇ.33 ಮೀಸಲಾತಿಯನ್ನು ಜಾರಿ ಮಾಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ಮಹಿಳಾ ಪ್ರಣಾಳಿಕೆಯ ಪ್ರಮುಖ ಅಂಶಗಳು
- ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಶೇಕಡಾ 40 ರಷ್ಟು ಮೀಸಲಾತಿ
- 50ರಷ್ಟು ಮಹಿಳೆಯರಿಗೆ ಉದ್ಯೋಗ ತೆರಿಗೆ ವಿನಾಯಿತಿ
- ಮಹಿಳಾ ಸ್ವಸಹಾಯ ಗುಂಪುಗಳಿಗೆ 4% ಬಡ್ಡಿಯಲ್ಲಿ ಸಾಲ
- 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್ ಮತ್ತು ಪದವಿ ವಿದ್ಯಾರ್ಥಿನಿಯರಿಗೆ ಸ್ಕೂಟಿ
- ಮಹಿಳೆಯರಿಗಾಗಿ ಸಂಜೆ ಶಾಲೆ ತೆರೆಯುವ ಘೋಷಣೆ
- ಒಂದು ವರ್ಷದಲ್ಲಿ 3 ಸಿಲಿಂಡರ್‌ಗಳ ಉಚಿತ ವಿತರಣೆ
- ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಎಫ್‌ಡಿ
- ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಸಹಾಯ ಕೇಂದ್ರ ಸ್ಥಾಪನೆ
- ಶೇ.25ರಷ್ಟು ಮಹಿಳಾ ಪೊಲೀಸ್ ಪಡೆಗಳಲ್ಲಿ ಉದ್ಯೋಗ