ಹೈದರಾಬಾದ್:ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕರು ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಕೇಳಿದ ಪ್ರಶ್ನಿಗಳಿವು..! 1) ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಉತ್ಪಾದಿಸುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಲಸಿಕೆಗಳ ಕೊರತೆ ಏಕೆ?
2) ಇತರೆ ದೇಶಗಳು 2020 ರಲ್ಲೇ ಜನತೆ ವ್ಯಾಕ್ಸಿನ್ ಪಡೆಯಬೇಕೆಂದು ಆದೇಶಿಸಿದ್ದವು. ಆದರೆ ಭಾರತ 2021 ರ ಜನವರಿವರೆಗೆ ಕಾದಿದ್ದು ಯಾಕೆ?
3) ಭಾರತ ಸರ್ಕಾರ ಜನವರಿ ಮತ್ತು ಮಾರ್ಚ್ (2021) ನಡುವೆ 6 ಕೋಟಿ ಲಸಿಕೆಗಳನ್ನು ಇತರೆ ದೇಶಗಳಿಗೆ ಯಾಕೆ ರಫ್ತು ಮಾಡಿತು? ಈ ಅವಧಿಯಲ್ಲಿ ಕೇವಲ 3.5 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಯಿತು.
ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಕರ್ತವ್ಯ ಮತ್ತು ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ವಿದೇಶಕ್ಕೆ ಹೆಚ್ಚಿನ ಲಸಿಕೆ ರವಾನೆ?
ಕಳೆದ ವರ್ಷವಷ್ಟೇ ಪ್ರಧಾನಿಯವರು, ನಮ್ಮ ಸರ್ಕಾರ ಲಸಿಕೆ ಹಾಕಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ 2021 ರ ಜನವರಿಯಲ್ಲಿ ಕೇವಲ 1 ಕೋಟಿ 60 ಲಕ್ಷ ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಭಾರತದಲ್ಲಿ ವ್ಯಾಕ್ಸಿನೇಷನ್ ಕಡಿಮೆ ಮಾಡಿ, ವಿದೇಶಕ್ಕೆ ಹೆಚ್ಚಿನ ವ್ಯಾಕ್ಸಿನ್ ರವಾನಿಸಲಾಗಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
‘ನಾಚಿಕೆಯಿಲ್ಲದ ಸರ್ಕಾರ’
ಕೇಂದ್ರದಲ್ಲಿರುವುದು ನಾಚಿಕೆಯಿಲ್ಲದ ಸರ್ಕಾರ. ಅತಿ ಹೆಚ್ಚು ಲಸಿಕೆ ಉತ್ಪಾದಿಸುವ ದೇಶವು ಇಂದು ವ್ಯಾಕ್ಸಿನ್ಗಾಗಿ ಇತರೆ ದೇಶಗಳ ಬಳಿ ಬೇಡುವ ಸ್ಥಿತಿಯಿದೆ. ಇದು ನಾಚಿಕೆಯಿಲ್ಲದ ಸರ್ಕಾರ. ಇಂಥ ಬೇಡುವ ಸ್ಥಿತಿಯನ್ನೇ ಸಾಧನೆಯೆಂದು ಬಿಂಬಿಸಲು ಹೊರಟಿದೆ ಎಂದು ಪ್ರಿಯಾಂಕಾ ಗುಡುಗಿದ್ದಾರೆ.