ರಾಯಪುರ/ ಖೈರಾಗಢ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಅಕ್ಟೋಬರ್ 30 ರಂದು) ಛತ್ತೀಸಗಢ ಮತದಾರರಿಗೆ ಭರಪೂರ ಚುನಾವಣಾ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ನಂತರ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ, ಅಡುಗೆ ಅನಿಲ ಸಿಲಿಂಡರ್ಗಳ ಮೇಲೆ ಸಬ್ಸಿಡಿ ನೀಡುವುದಾಗಿ ಮತ್ತು ರಸ್ತೆ ಅಪಘಾತಗಳಿಗೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ಘೋಷಿಸಿದ್ದಾರೆ.
ಖೈರಾಗಢ ವಿಧಾನಸಭಾ ಕ್ಷೇತ್ರದ ಜಲ್ಬಂಧಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಸುಮಾರು 6,000 ಸರ್ಕಾರಿ ಹೈಯರ್ ಸೆಕೆಂಡರಿ ಮತ್ತು ಪ್ರೌಢ ಶಾಲೆಗಳನ್ನು ಸ್ವಾಮಿ ಆತ್ಮಾನಂದ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಅವರು ಭರವಸೆ ನೀಡಿದರು.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಗೆ 500 ರೂ.ಗಳ ಸಬ್ಸಿಡಿ ನೀಡಲು ಮಹತಾರಿ ನ್ಯಾಯ್ ಯೋಜನೆಯನ್ನು ಪ್ರಾರಂಭಿಸಲಾಗುವುದು ಮತ್ತು ಸ್ವಸಹಾಯ ಗುಂಪುಗಳ ಸಾಲ ಮತ್ತು ಸಾಕ್ಷಮ್ ಯೋಜನೆಯಡಿ ಮಹಿಳೆಯರು ಪಡೆದ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು.