ನವದೆಹಲಿ: ನಿಧಾನಗತಿಯ ವ್ಯಾಕ್ಸಿನೇಷನ್ಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಗೊಂದಲಮಯ ವ್ಯಾಕ್ಸಿನೇಷನ್ಗೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ #SpeakUpForFreeUniversalVaccination’ ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ಅವರು, "ನಾವು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಲ್ಲಿ ಒಬ್ಬರಾಗಿದ್ದೇವೆ. ಆದರೂ ನಮ್ಮ ಜನಸಂಖ್ಯೆಯ ಶೇಕಡಾ 3.4 ರಷ್ಟು ಜನರಿಗೆ ಮಾತ್ರ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಭಾರತದ ಗೊಂದಲಮಯ ಹಾಗೂ ಕ್ಷೀಣಿಸಿದ ವ್ಯಾಕ್ಸಿನೇಷನ್ಗೆ ಯಾರು ಕಾರಣ?" ಎಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 15 ರಂದು ಪ್ರಿಯಾಂಕಾ ವಿಡಿಯೋವೊಂದನ್ನು ಸಹ ಟ್ವೀಟರ್ನಲ್ಲಿ ಲಗತ್ತಿಸಿದ್ದಾರೆ. ಮುಂದಿನ ವರ್ಷದ ವೇಳೆಗೆ ದೇಶದ ಪ್ರತಿಯೊಬ್ಬ ಜನರಿಗೆ ಲಸಿಕೆ ಹಾಕಲಾಗುವುದು ಎಂದು ಪ್ರಧಾನಮಂತ್ರಿ ಅವರು ಘೋಷಿಸಿದ್ದರು. ಈಗಾಗಲೇ ನಾವು 2021ರ ಮಧ್ಯ ಭಾಗದಲ್ಲಿದ್ದೇವೆ. ಆದರೆ, ಸರ್ಕಾರದ ವ್ಯಾಕ್ಸಿನೇಷನ್ ದಿನವೊಂದಕ್ಕೆ 19 ಲಕ್ಷವಷ್ಟೇ ಆಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ಗುರಿ ಮುಟ್ಟಲು, ಪ್ರತಿದಿನ 70 ರಿಂದ 80 ಲಕ್ಷ ಜನರಿಗೆ ಲಸಿಕೆ ನೀಡಬೇಕಾಗಿದೆ. ಆದರೆ ಈಗ ಆಗಿರುವುದು ಕೇವಲ ಅದರ ಕಾಲು ಭಾಗದಷ್ಟು ಅಷ್ಟೇ ಎಂದು ಕಿಡಿ ಕಾರಿದ್ದಾರೆ.
ಮೊದಲ ಅಲೆಯಲ್ಲಿ ತಾನೇ ಜವಾಬ್ದಾರಿ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಎರಡನೇ ತರಂಗ ಅಪ್ಪಳಿಸಿದಂತೆ ಆ ಜವಾಬ್ದಾರಿಯನ್ನ ರಾಜ್ಯ ಸರ್ಕಾರಗಳಿಗೆ ವಹಿಸಿ ಕೈ ತೊಳೆದುಕೊಂಡಿದೆ. ಇದು ಸರಿಯಲ್ಲ ಎಂದು ಹರಿಹಾಯ್ದಿರುವ ಅವರು, ಜರ್ಮನಿ ಹಾಗೂ ಅಮೆರಿಕ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಜನರ ಆರೋಗ್ಯ ರಕ್ಷಣೆಗೆ ವಿಭಿನ್ನ ದಾರಿ ತುಳಿದ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ರಾಜ್ಯ ಸರ್ಕಾರಗಳಿಗೆ ಟೆಂಡರ್ ಕರೆಯಲು ಅವಕಾಶ ನೀಡಲಾಗಿದೆ. ಹಾಗಾದರೇ ಕೇಂದ್ರ ಸರ್ಕಾರ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಯಾರು ಹೊಣೆ ಎಂಬ ಘೋಷವಾಖ್ಯೆದೊಂದಿಗೆ ಪ್ರಿಯಾಂಕಾ ಅಭಿಯಾನ ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಹೇಳಿದ್ದಾರೆ.