ಮುಂಬೈ: ಫೆಬ್ರವರಿ 15 ರಂದು ಮುಂಬೈನ ಪಂಚತಾರಾ ಹೋಟೆಲ್ ಒಂದರ ಹೊರಗೆ ಕ್ರಿಕೆಟಿಗ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ಮಾಡಿದ್ದಕ್ಕಾಗಿ ಓಶಿವಾರ ಪೊಲೀಸರು ಎಂಟು ಜನರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ. ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿದ ದೂರಿನ ಪ್ರಕಾರ, ಶಾ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೊದಲಿಗೆ ಬೇಸ್‌ಬಾಲ್ ಬ್ಯಾಟ್‌ಗಳಿಂದ ದಾಳಿ ನಡೆಸಲಾಯಿತು. ನಂತರ ಆರೋಪಿಗಳು ಕಾರನ್ನು ಹಿಂಬಾಲಿಸಿ ಹಣ ನೀಡದಿದ್ದರೆ ಸುಳ್ಳು ಕೇಸು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಲಾಗಿದೆ.
ಘಟನೆಯ ನಂತರ ಒಶಿವಾರಾ ಪೊಲೀಸರು ಎಂಟು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಕಾನೂನುಬಾಹಿರವಾಗಿ ಗುಂಪುಗೂಡುವಿಕೆ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿದ ಅಪರಾಧಕ್ಕಾಗಿ 143, 148,149, 384, 437, 504, 506 ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ. ಶಾ ಅವರು ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋದಾಗ ಈ ಘಟನೆ ನಡೆದಿದೆ.
ಪಂಚತಾರಾ ಹೋಟೆಲ್ನಲ್ಲಿ ಊಟಕ್ಕೆ ಹೋದ ವೇಳೆ ಅಲ್ಲಿ ಅಪರಿಚಿತ ಆರೋಪಿಗಳು ಅವರ ಬಳಿಗೆ ಬಂದು ಸೆಲ್ಫಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಶಾ ಇಬ್ಬರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಆದರೆ ಅದೇ ಗುಂಪಿನ ಯುವಕರು ಮತ್ತೆ ಬಂದು ಸೆಲ್ಫಿ ಕೇಳಿದ್ದಾರೆ. ಈ ಹಂತದಲ್ಲಿ ಸೆಲ್ಫಿ ತೆಗೆಸಿಕೊಳ್ಳಲು ಶಾ ನಿರಾಕರಿಸಿದ್ದು, ನಾನು ಸ್ನೇಹಿತರೊಂದಿಗೆ ಊಟ ಮಾಡಲು ಬಂದಿದ್ದೇನೆ ಮತ್ತು ಈ ಸಮಯದಲ್ಲಿ ನನಗೆ ಡಿಸ್ಟರ್ಬ್ ಮಾಡಬೇಡಿ ಎಂದಿದ್ದಾರೆ. ಆದರೂ ಅವರು ಬಿಡದೆ ಸೆಲ್ಫಿಗಾಗಿ ಒತ್ತಾಯಿಸತೊಡಗಿದಾಗ ಪೃಥ್ವಿಯ ಸ್ನೇಹಿತ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿ ದೂರು ನೀಡಿದ್ದಾನೆ.
ಈ ಸಂದರ್ಭದಲ್ಲಿ ಹೊಟೇಲ್‌ನಿಂದ ಹೊರಹೋಗುವಂತೆ ಆರೋಪಿಗಳಿಗೆ ಮ್ಯಾನೇಜರ್ ಹೇಳಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಯುವಕರ ಗುಂಪು ಶಾ ಮತ್ತು ಅವರ ಸ್ನೇಹಿತ ಊಟ ಮುಗಿಸಿ ಹೋಟೆಲ್‌ನಿಂದ ಹೊರಗೆ ಬಂದಾಗ ಅವರ ಮೇಲೆ ಹಲ್ಲೆ ಮಾಡಲು ನಿರ್ಧರಿಸಿ ಬೇಸ್‌ಬಾಲ್ ಬ್ಯಾಟ್‌ಗಳೊಂದಿಗೆ ನಿಂತಿದ್ದರು. ಆರೋಪಿಗಳು ಬೇಸ್‌ಬಾಲ್ ಬ್ಯಾಟ್‌ಗಳಿಂದ ಪೃಥ್ವಿ ಅವರ ಸ್ನೇಹಿತನ ಕಾರಿನ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಈ ಸಂದರ್ಭದಲ್ಲಿ ಪೃಥ್ವಿ ನಮ್ಮ ಕಾರಿನಲ್ಲೇ ಇದ್ದರು. ಆದರೆ ಸುಮ್ಮನೆ ತಕರಾರು ಬೆಳೆಸುವುದು ಬೇಡವೆಂದು ನಾವು ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಿದೆವು ಎಂದು ಪೃಥ್ವಿ ಅವರ ಸ್ನೇಹಿತ ತಿಳಿಸಿದ್ದಾರೆ. ಇಷ್ಟಾದರೂ ಬಿಡದ ಆರೋಪಿಗಳು ಶಾ ಕಾರನ್ನು ಹಿಂಬಾಲಿಸಿದ್ದಾರೆ. ನಂತರ ಜೋಗೇಶ್ವರಿಯ ಲೋಟಸ್ ಪೆಟ್ರೋಲ್ ಪಂಪ್ ಬಳಿ ಶಾ ಸ್ನೇಹಿತ ತನ್ನ ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಬಳಿ ಬಂದ ಮಹಿಳೆಯೊಬ್ಬಳು ಈ ವಿಷಯ ಇತ್ಯರ್ಥವಾಗಬೇಕಾದರೆ 50,000 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾಳೆ. ಒಂದು ವೇಳೆ ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ.
ಈ ಘಟನೆಯ ನಂತರ ಯಾದವ್ ಓಶಿವಾರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹೋಟೆಲ್ ಸಿಬ್ಬಂದಿ ಶಾ ಜೊತೆ ಸೆಲ್ಫಿ ತೆಗೆದುಕೊಂಡವರ ಹೆಸರು ಮತ್ತು ಸಂಪರ್ಕ ಸಂಖ್ಯೆಗಳನ್ನು ಹುಡುಕಿ ಪೊಲೀಸರಿಗೆ ನೀಡಿದ್ದಾರೆ. ಸನಾ ಅಲಿಯಾಸ್ ಸಪ್ನಾ ಗಿಲ್ ಮತ್ತು ಶೋಭಿತ್ ಠಾಕೂರ್ ಎಂದು ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್ನಿಂದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ.. ಆಸ್ಪತ್ರೆಗೆ ದಾಖಲಾದ ಪತಿ