ಮುಂಬೈ(ಮಹಾರಾಷ್ಟ್ರ): ಕ್ರಿಕೆಟಿಗ ಪೃಥ್ವಿ ಶಾ ಅವರ ಕಾರಿನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಸಪ್ನಾ ಗಿಲ್ ಅವರು ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಪೃಥ್ವಿ ಶಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಸಪ್ನಾ ಪರ ವಕೀಲ ಕಾಶಿಫ್ ಅಲಿ ಖಾನ್ ಸೋಮವಾರ ಸಲ್ಲಿಸಿದ ಅರ್ಜಿಯಲ್ಲಿ, ಕ್ರಿಕೆಟಿಗ ಪೃಥ್ವಿ ಶಾ ಸಾರ್ವಜನಿಕ ಸ್ಥಳದಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಮತ್ತು ಮಾರಕಾಸ್ತ್ರಗಳಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಅಪರಾಧ ಕೃತ್ಯ ಎಸಗಲು ಶಾ ಇತರರನ್ನು ಸೇರಿಸಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ 34, 120 ಎ, 144, 146, 148, 149, 323, 324, 351, 354 ಮತ್ತು 509 ಮತ್ತು ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 184ರ ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು
ಬಂಧನದಲ್ಲಿರುವ ಸಪ್ನಾ ಗಿಲ್:ಕಳೆದ ಬುಧವಾರ ಬೆಳ್ಳಗೆ ಮುಂಬೈನ ಸಾಂತಾಕ್ರೂಜ್ ಬಳಿಯ ಹೋಟೆಲ್ ಹೊರಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ ಪೃಥ್ವಿ ಶಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಪ್ನಾ ಅವರನ್ನು ಕಳೆದ ಗುರುವಾರ ಬಂಧಿಸಲಾಗಿತ್ತು. ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತ ಶೋಬಿತ್ ಠಾಕೂರ್, ಹೆಚ್ಚು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಿರಾಕರಿಸಿದ ಪೃಥ್ವಿ ಶಾ ಮೇಲೆ ಹಲ್ಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮುಂಬೈನ ಸ್ಥಳೀಯ ನ್ಯಾಯಾಲಯ ಸಪ್ನಾ ಗಿಲ್ ಅವರನ್ನು ಫೆಬ್ರವರಿ 20 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ನಿನ್ನೆ ಕೋರ್ಟ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶಾ ಅವರ ಸ್ನೇಹಿತ ಆಶಿಶ್ ಯಾದವ್ ಅವರು ಈ ಕುರಿತು ದೂರು ನೀಡಿದ್ದರು, ಯಾದವ್ ಮೂರು ವರ್ಷಗಳಿಂದ ಪೃಥ್ವಿ ಶಾ ಅವರ ಫ್ಲಾಟ್‌ಮೇಟ್ ಆಗಿದ್ದು, ಕೆಫೆ ನಡೆಸುತ್ತಿದ್ದಾರೆ. ಈ ಸಂಬಂಧ ಓಶಿವಾರ ಪೊಲೀಸರು ಗಿಲ್ ಅವರನ್ನು ಗುರುವಾರ ಬಂಧಿಸಿದ್ದರು. ಕ್ರಿಕೆಟಿಗನ ಕಾರನ್ನು ಹಾನಿಗೊಳಿಸುವ ಮೂಲಕ ಬೆದರಿಸಲು ಪ್ರಯತ್ನಿಸಿದ ಮತ್ತು ನಕಲಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಮಂಗಳವಾರ ಮತ್ತೆ ಆಶಿಶ್ ಯಾದವ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ವೇಳೆ, ಯಾದವ್ ಆರೋಪಿ ಸಪ್ನಾ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯ ನಂತರ ಪೊಲೀಸರು ಐಪಿಸಿ ಸೆಕ್ಷನ್ 387 ಅನ್ನು ಎಫ್ಐಆರ್ನಲ್ಲಿ ಸೇರ್ಪಡೆ ಮಾಡಿದ್ದರು.
ಇದನ್ನೂ ಓದಿ:ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮಂಧಾನ: 150 ಅಂತಾರಾಷ್ಟ್ರೀಯ ಪಂದ್ಯ ಆಡಿದ ಕೌರ್ ದಾಖಲೆ