ಗುರುಗ್ರಾಮ(ಹರಿಯಾಣ): ಕಳ್ಳತನ ಪ್ರಕರಣದಲ್ಲಿ ಸೆರೆಯಾಗಿದ್ದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಕೋರ್ಟ್ನ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಈ ವೇಳೆ, ಆರೋಪಿ ಗಾಯಗೊಂಡಿದ್ದು, ತಲೆಗೂ ತೀವ್ರ ಪೆಟ್ಟಾಗಿತ್ತು. ಅಲ್ಲೇ ಇದ್ದ ವಕೀಲರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಪ್ರಕರಣ ಸೋಮವಾರ ಗುರುಗ್ರಾಮ ಜಿಲ್ಲಾ ನ್ಯಾಯಾಲದಲ್ಲಿ ನಡೆದಿದೆ.
ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಬಿಹಾರದ ದರ್ಭಾಂಗಾ ನಿವಾಸಿ ರಾಜು ಎಂದು ಗುರುತಿಸಲಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ 28 ವರ್ಷದ ರಾಜು ಗುರುಗ್ರಾಮದ ಸರಸ್ವತಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದ. ಗೋದಾಮಿನ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿ ರಾಜುವನ್ನು ಸೋಮವಾರ ತನಿಖಾಧಿಕಾರಿ ಜೆಎಂಐಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.