ಮಿರ್ಜಾಪುರ(ಉತ್ತರ ಪ್ರದೇಶ):ತಾಯಿಯೊಬ್ಬಳು ತನ್ನ ಮಕ್ಕಳನ್ನು ಮನೆಯಲ್ಲಿ ತಲೆ ಕೆಳಗಾಗಿ ನೇತುಹಾಕಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನೆಲ್ಲೇ, ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಮಗುವನ್ನು ತಲೆಕೆಳಗಾಗಿ ನೇತಾಡಿಸಿದ ಆಘಾತಕಾರಿ ಘಟನೆ ನಡೆದಿದೆ.
ಬಾಲಕ ತಲೆ ಕೆಳಗಾಗಿ ನೇತಾಡುತ್ತಿರುವ ಹಾಗೂ ಹಲವಾರು ಮಕ್ಕಳು ಅದನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ವರದಿಗಳ ಪ್ರಕಾರ, ಈ ಘಟನೆಯು ಗುರುವಾರ ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ್ ಸಂಸ್ಥಾನ್ ಜೂನಿಯರ್ ಹೈಸ್ಕೂಲ್‌ನಲ್ಲಿ ನಡೆದಿದೆ. ಶಾಲೆಯ ಪ್ರಾಂಶುಪಾಲರಾದ ಮನೋಜ್ ವಿಶ್ವಕರ್ಮ ಅವರು 2ನೇ ತರಗತಿಯ ವಿದ್ಯಾರ್ಥಿ ಸೋನು ಯಾದವ್ಗೆ ಈ ರೀತಿಯ 'ಶಿಕ್ಷೆ' ನೀಡಿದ್ದಾರೆ.