ನವದೆಹಲಿ:ಭಾರತದ ಅತಿಥೇಯತ್ವದಲ್ಲಿ ಜಿ 20 ಶೃಂಗಸಭೆ ಯಶಸ್ವಿಯಾಗಿ ದೆಹಲಿಯಲ್ಲಿ ನಡೆದಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಜಾಗತಿಕ ನಾಯಕರ ಆಗಮನದ ಹಿನ್ನೆಲೆ ನಗರದ ಭದ್ರತೆ ಸೇರಿದಂತೆ ಸಂಚಾರ ಸೌಲಭ್ಯವನ್ನು ಅತ್ಯಂತ ಯಶಸ್ವಿಯಾಗಿ ದೆಹಲಿ ಪೊಲೀಸರು ನಿರ್ವಹಿಸಿ ಶಹಬ್ಬಾಷ್ ಎನಿಸಿಕೊಂಡಿದ್ದಾರೆ . ಈ ಹಿನ್ನೆಲೆಯಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪೊಲೀಸರಿಗಾಗಿ ವಿಶೇಷ ಔತಣಕೂಟ ಆಯೋಜಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆದ ಈ ಶೃಂಗಶಬೆಯಲ್ಲಿ 30 ಜಾಗತಿಕ ನಾಯಕರು, ಯುರೋಪಿಯನ್ ಯುನಿಯನ್ನ ಅಧಿಕಾರಿಗಳು, ಅತಿಥಿ ದೇಶಗಳು ನಿಯೋಗ, ಅಂತಾರಾಷ್ಟ್ರೀಯ ಸಂಘಟನೆಯ 14 ಮುಖ್ಯಸ್ಥರು ಆಗಮಿಸಿದ್ದರು. ದೆಹಲಿ ಪೊಲೀಸರಿಗೆ ಭಾರತೀಯ ವಾಯುಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಕೆಲವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಂತಹ ವಿಶೇಷ ಕೇಂದ್ರೀಯ ಸಂಸ್ಥೆಗಳೂ ಭದ್ರತೆಗೆ ಜೊತೆಯಾಗಿದ್ದವು.
ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 50 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಡಾಗ್ ಸ್ಕಾಡ್ ಸೇರಿದಂತೆ ವಿಶೇಷ ಘಟಕಗಳನ್ನು ಕೂಡ ಸುರಕ್ಷತೆಗೆ ನೇಮಿಸಲಾಗಿತ್ತು. ಶೃಂಗಸಭೆ ಅಚ್ಚುಕಟ್ಟಾಗಿ ನಡೆಯುವಲ್ಲಿ ದೆಹಲಿ ಪೊಲೀಸರ ಪಾತ್ರ ಕೂಡ ಇದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಆಯ್ದ ಸುಮಾರು 450 ಪೊಲೀಸ್ ಸಿಬ್ಬಂದಿಗಳೊಂದಿಗೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.