ನವದೆಹಲಿ: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಪಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಕಳೆದ ಭಾನುವಾರ ಗುಜರಾತ್ನ 81 ಪುರಸಭೆ, 31 ಜಿಲ್ಲಾ ಪಂಚಾಯಿತಿಗಳು ಹಾಗೂ 231 ತಾಲ್ಲೂಕು ಪಂಚಾಯಿತಿಗಳ ಸ್ಥಾನ ಸೇರಿ ಒಟ್ಟು ಗುಜರಾತ್ನ 8,474 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶದಲ್ಲಿ ಬಿಜೆಪಿ 1,182 ಸ್ಥಾನ, ಕಾಂಗ್ರೆಸ್ 214 ಸ್ಥಾನ ಪಕ್ಷೇತರ 73 ಸ್ಥಾನ ಉಳಿದಂತೆ ಆಮ್ ಆದ್ಮಿ, ಬಹುಜನ ಸಮಾಜವಾದಿ ಪಕ್ಷ 2 ಹಾಗೂ ಇತರೆ 10 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಇದನ್ನೂ ಓದಿ: ಮನೆಯಲ್ಲಿ ಕೋವಿಡ್ ಲಸಿಕೆ ಪಡೆದ ಸಚಿವ ಬಿ.ಸಿ.ಪಾಟೀಲ್: ವರದಿ ಕೇಳಿದ ಕೇಂದ್ರ ಸರ್ಕಾರ
ಫಲಿತಾಂಶ ಹೊರಬರುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಜನತೆ ಬಿಜೆಪಿ ಜೊತೆಗಿದ್ದಾರೆ. ಉತ್ತಮ ಆಡಳಿತಕ್ಕಾಗಿ ಸಿಕ್ಕ ಪ್ರತಿಫಲ ಇದಾಗಿದೆ. ಬಿಜೆಪಿ ಮೇಲೆ ಜನರು ಇಟ್ಟಿರುವ ಅಚಲ ನಂಬಿಕೆ ಹಾಗೂ ವಾತ್ಸಲ್ಯಕ್ಕಾಗಿ ನಾನು ಗುಜರಾತ್ ಜನತೆಯ ತಲೆಬಾಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ಧೂಳೀಪಟವಾಗಿದ್ದು, ಸೋಲಿನ ಹೊಣೆ ಹೊತ್ತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ ಡಾ ಹಾಗೂ ಗುಜರಾತ್ ಶಾಸಕಾಂಗ ಪಕ್ಷದ ನಾಯಕ ಪರೇಶ್ ಧನನಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.