ಕೊಚ್ಚಿ(ಕೇರಳ):2 ದಿನಗಳ ದಕ್ಷಿಣ ಭಾರತ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಕೇರಳದ ಕೊಚ್ಚಿಗೆ ಭೇಟಿ ನೀಡಿದರು. ಕೇರಳದಲ್ಲಿ ಇಂದು ಓಣಂ ಹಬ್ಬ ಆಚರಣೆ ಇದ್ದ ಕಾರಣ ಸಾಂಪ್ರದಾಯಿಕ ಪಂಚೆ, ಶರ್ಟ್ ಧರಿಸಿ ಕೇರಳಿಗರ ಮನಗೆದ್ದರು.
ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಗಳನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸ್ವಾಗತಿಸಿದರು. ಬಳಿಕ ಪೆಟ್ಟಾದಿಂದ ಎಸ್ಎನ್ ಜಂಕ್ಷನ್ವರೆಗೆ ನಿರ್ಮಿಸಲಾಗಿರುವ ಕೊಚ್ಚಿ ಮೆಟ್ರೋ ಮೊದಲ ಹಂತದ ವಿಸ್ತರಣೆ ಯೋಜನೆ ಮತ್ತು ಭಾರತೀಯ ರೈಲ್ವೆಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಮೆಟ್ರೋ ಯೋಜನೆ ಉದ್ಘಾಟನೆಗೂ ಮೊದಲು ಸಿಎಂ ಪಿಣರಾಯಿ ಅವರು ಪ್ರಧಾನಿ ಮೋದಿಗೆ ಉಡುಗೊರೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇರಳದ ಸಂಪರ್ಕ ಸೇತುವೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಲಪಡಿಸಲಿದೆ. ಕೇರಳದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಕೊಚ್ಚಿಯಲ್ಲಿ ವಿಸ್ತರಿಸಲಾದ ಮೆಟ್ರೋ ರೈಲುಗಳು ಶೇಕಡಾ 55 ರಷ್ಟು ಸೌರಶಕ್ತಿಯಿಂದ ಚಾಲಿತವಾಗಿವೆ. ದೇಶದಲ್ಲಿ ಮೊದಲ ಮೆಟ್ರೋ ಬಂದಿರುವುದು 40 ವರ್ಷಗಳ ಹಿಂದೆ. ಬಳಿಕ 30 ವರ್ಷದ ಕಾಲಘಟದ್ದಲ್ಲಿ 280 ಕಿಲೋಮೀಟರ್ಗಿಂತಲೂ ಕಡಿಮೆ ಮೆಟ್ರೋ ಕಿಲೋಮೀಟರ್ ಮೆಟ್ರೋ ನಿರ್ಮಾಣವಾಗಿದೆ. ಆದರೆ ಕಳೆದ 8 ವರ್ಷಗಳಲ್ಲಿ 1,000 ಕಿಲೋಮೀಟರ್‌ಗೂ ಅಧಿಕ ಕಾಮಗಾರಿಗಳು ನಡೆಯುತ್ತಿದೆ ಎಂದು ಮೋದಿ ಹೇಳಿದರು.
ಮಲೆಯಾಳಂನಲ್ಲಿ ಮೋದಿ ಭಾಷಣ:ಬಳಿಕ ನೆಡುಂಬಶ್ಶೇರಿ ವಿಮಾನ ನಿಲ್ದಾಣದ ಪರಿಸರದಲ್ಲಿ ನಡೆದ ಬಿಜೆಪಿ ಸಭೆಯನ್ನುದ್ದೇಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲಯಾಳಂನಲ್ಲಿಯೇ ಭಾಷಣ ಆರಂಭಿಸಿದ ಮೋದಿ ಓಣಂ ಹಬ್ಬದ ಶುಭ ಕೋರಿದರು.
ಐಎನ್ಎಸ್ ವಿಕ್ರಾಂತ್ ನೌಕೆಗೆ ಚಾಲನೆ:ಇನ್ನು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಸ್ವದೇಶಿ ನಿರ್ಮಿತ ನೌಕೆಯಾದ ಐಎನ್ಎಸ್ ವಿಕ್ರಾಂತ್ ನೌಕೆಗೆ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ 2 ರಂದು 9.30 ಕ್ಕೆ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನೌಕೆಯನ್ನು ಕಾರ್ಯಾಚರಣೆಗೆ ಒಪ್ಪಿಸಲಿದ್ದಾರೆ.
ಓದಿ:ಚಾಮರಾಜನಗರದಲ್ಲಿ ಮಳೆ ಹಾನಿ ವೀಕ್ಷಿಸಿದ ಸಚಿವ ಸೋಮಣ್ಣ.. ಎಸ್ಪಿಗೆ ಫುಲ್ ಕ್ಲಾಸ್