ಹೈದರಾಬಾದ್:ಮಹಾಮಾರಿ ಕೊರೊನಾ ವೈರಸ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದು, ನೆರೆಯ ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಬಾಂಗ್ಲಾದೇಶ 50ನೇ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿರುವ ಕಾರಣ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಆಹ್ವಾನ ನೀಡಿದ್ದು, ಇಂದು ದೆಹಲಿಯಿಂದ ನಮೋ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಯಾಣ ಬೆಳೆಸಲಿದ್ದಾರೆ.
ಪ್ರಧಾನಿ ಮೋದಿ ಬಾಂಗ್ಲಾ ಪ್ರವಾಸ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮೋ ಟ್ವೀಟ್ ಮಾಡಿದ್ದು, ಕೊರೊನಾ ಬಳಿಕ ಇದು ನನ್ನ ಮೊದಲ ವಿದೇಶಿ ಭೇಟಿಯಾಗಿದ್ದು, ನೆರೆಯ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗಿಯಾಗಲು ನಾನು ಉತ್ಸುಕನಾಗಿದ್ದು, ಬಾಂಗ್ಲಾದೇಶದ ರಾಷ್ಟ್ರ ಪಿತಾಮಹ ಬಂಗಬಂಧು ಶೇಕ್ ಮುಜಿಬುರ್ ರಹಮಾನ್ ಸಮಾಧಿಗೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆ ಹೊತ್ತಲ್ಲೇ ನಮೋ ಬಾಂಗ್ಲಾ ಪ್ರವಾಸ... ಪ್ರಧಾನಿ ಮೋದಿ ಚತುರ ನಡೆ!?
ಮದುವಣಗಿತ್ತಿಯಂತೆ ಶೃಂಗಾರಗೊಂಡ ಢಾಕಾ
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬಾಂಗ್ಲಾ ರಾಜಧಾನಿ ಢಾಕಾ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಪ್ರಮುಖ ಸ್ಥಳಗಳಲ್ಲಿ ಭಾರತದ ಬಾವುಟ, ಮೋದಿ ಬಾವಚಿತ್ರದ ಫೋಟೋ ರಾರಾಜಿಸುತ್ತಿವೆ. ಇನ್ನು ಪ್ರಧಾನಿ ಬಾಂಗ್ಲಾ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಜತೆ ಮಾತುಕತೆ ನಡೆಸಲಿರುವ ಮೋದಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಎರಡು ದಿನಗಳ ಭೇಟಿಯ ಸಮಯದಲ್ಲಿ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಹೊಸ ಪ್ರಕಟಣೆಗಳನ್ನು ಹೊರಡಿಸಬಹುದು.
ಜತೆಗೆ ಬಾಂಗ್ಲಾ ಒಳನುಸುಳುವಿಕೆ, ವ್ಯಾಪಾರ ಅಸಮಾನತೆ, ಟೀಸ್ಟಾ ನದಿ ವಿವಾದ ಪ್ರಮುಖ ಸಮಸ್ಯೆಯಾಗಿದ್ದು, ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್(ಬಿಆರ್ಐ)ಯಲ್ಲಿ ಬಾಂಗ್ಲಾ ಭಾಗವಹಿಸುವಿಕೆ ಕೂಡ ಒಂದು ಸಂಗತಿಯಾಗಿದೆ.ಈ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.