ನವದೆಹಲಿ :ವಿಧ್ವಂಸಕ ಶಕ್ತಿಗಳು ಭಯೋತ್ಪಾದನೆಯ ಮೂಲಕ ಕೆಲಕಾಲ ಅಧಿಕಾರ ಹೊಂದಿದ್ದರೂ, ಅವರ ಅಸ್ತಿತ್ವ ಶಾಶ್ವತವಾಗಿರುವುದಿಲ್ಲ. ಮಾನವೀಯತೆಯನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದು ಅಧಿಕಾರ ನಡೆಸಲು ಮುಂದಾಗುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಇಂತಹ ಟೀಕೆಗಳನ್ನು ಮಾಡಿದ್ದಾರೆ. ಗುಜರಾತಿನ ಐತಿಹಾಸಿಕ ಸೋಮನಾಥ ದೇವಸ್ಥಾನಕ್ಕೆ ಸಂಬಂಧಿಸಿದ 83 ಕೋಟಿ ರೂಪಾಯಿಗಳ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸೋಮನಾಥ ದೇವಸ್ಥಾನವನ್ನು ಹಲವು ಬಾರಿ ಧ್ವಂಸ ಮಾಡಲಾಗಿದೆ. ವಿಗ್ರಹಗಳನ್ನು ಅಪವಿತ್ರಗೊಳಿಸಲಾಗಿದೆ. ದೇವಸ್ಥಾನ ನಾಶ ಮಾಡಲು ಯತ್ನಿಸಿದರು. ಆದರೆ, ದಾಳಿ ಮಾಡಿದ ಪ್ರತಿಬಾರಿಯೂ ಮತ್ತೆ ತನ್ನ ವೈಭವವನ್ನು ದೇವಾಲಯ ಪ್ರದರ್ಶಿಸುತ್ತಲ್ಲೇ ಇದೆ. ನಮಗೆ ಇದು ಆತ್ಮ ವಿಶ್ವಾಸವನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತದ 2013ರಲ್ಲಿ 65ನೇ ಸ್ಥಾನದಲ್ಲಿತ್ತು. 2019ರಲ್ಲಿ 34ನೇ ಸ್ಥಾನ ಪಡೆದಿದೆ. ಪ್ರವಾಸೋದ್ಯಮ ಬಲಪಡಿಸುವ ಅಗತ್ಯವಿದ್ದು, ಇದರಿಂದ ಯುವಕರಿಗೆ ಉದ್ಯೋಗವನ್ನು ಕೂಡ ಒದಗಿಸಬಹುದು ಎಂದರು.