ಮೆಹಬೂಬ್ನಗರ (ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಅವರಿಂದು ತೆಲಂಗಾಣದಲ್ಲಿ 13,500 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮೆಹಬೂಬ್ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ ಅವರು, ರಸ್ತೆ ಅಭಿವೃದ್ಧಿ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಪ್ರಧಾನಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಹೈದರಾಬಾದ್ (ಕಾಚಿಗುಡ) - ರಾಯಚೂರು - ಹೈದರಾಬಾದ್ (ಕಾಚಿಗುಡ) ರೈಲು ಸೇವೆಗೆ ಕೃಷ್ಣ ರೈಲ್ವೇ ನಿಲ್ದಾಣದಿಂದ ಹಸಿರು ನಿಶಾನೆ ತೋರಿದರು.
ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಾಲು ಸಾಲು ಹಬ್ಬಗಳು ಬರಲಿವೆ. ನವರಾತ್ರಿ ಹಬ್ಬವೂ ಪ್ರಾರಂಭವಾಗಲಿದೆ. ಇದಕ್ಕೂ ಮೊದಲೇ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮೂಲಕ ನಾವು 'ಶಕ್ತಿ'ಯನ್ನು ಪೂಜಿಸಿದ್ದೇವೆ ಎಂದರು.
ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ: "ತೆಲಂಗಾಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ತೆಲಂಗಾಣವನ್ನು ಅಭಿನಂದಿಸುತ್ತೇನೆ. ರಾಜ್ಯದ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತರಲಿರುವ ಅನೇಕ ರಸ್ತೆ ಸಂಪರ್ಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ನಾಗ್ಪುರ-ವಿಜಯವಾಡ ಕಾರಿಡಾರ್ಗೆ ಚಾಲನೆ ನೀಡಲಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಅನುಕೂಲವಾಗಲಿದೆ. ಈ ಮೂರು ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ ಮತ್ತು ಇತರೆ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ" ಎಂದು ಪ್ರಧಾನಿ ಹೇಳಿದರು.