ಕರ್ನಾಟಕ

karnataka

ETV Bharat / bharat

ಯಶೋಭೂಮಿಯಲ್ಲಿ 13 ಸಾವಿರ ಕೋಟಿ ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಕುಶಲಕರ್ಮಿಗಳಿಗೆ ನೆರವಾಗುವ ಮಹತ್ವದ ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ಚಾಲನೆ ನೀಡಿದರು.

ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

By ETV Bharat Karnataka Team

Published : Sep 17, 2023, 7:29 PM IST

ನವದೆಹಲಿ:ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ಬಹುನಿರೀಕ್ಷಿತ ಪಿಎಂ ಕುಶಲಕರ್ಮಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ವಿದ್ಯುಕ್ತ ಚಾಲನೆ ನೀಡಿದರು. ಇಲ್ಲಿನ ವಿಶ್ವದ ಅತಿದೊಡ್ಡ ಸಭಾಂಗಣ ಯಶೋಭೂಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 13 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಲೋಕಾರ್ಪಣೆ ಮಾಡಿದರು. ಇದೇ ವೇಳೆ ಯಶೋಭೂಮಿಯಲ್ಲಿ ಪ್ರದರ್ಶಿಸಲಾದ ಕರಕುಶಲ ಕಲೆಗಳನ್ನೂ ಪ್ರಧಾನಿ ವೀಕ್ಷಿಸಿ, ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ, ದೇಹಕ್ಕೆ ಬೆನ್ನೆಲುಬು ಎಷ್ಟು ಮುಖ್ಯವೋ, ಸಮಾಜಕ್ಕೆ ಕರಕುಶಲ ಕರ್ಮಿಗಳು ಅಗತ್ಯ. 18 ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಕರ್ಮಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಕುಶಲಕರ್ಮಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅವರಿಗೆ ದಿನಕ್ಕೆ 500 ರೂ. ನೀಡಲಾಗುವುದು. ಸಾವಿರಾರು ವರ್ಷಗಳಿಂದ ಭಾರತದ ಏಳಿಗೆಗೆ ವಿಶ್ವಕರ್ಮ ಮಹರ್ಷಿಗಳು ಕಾರಣೀಭೂತರು ಎಂದು ಬಣ್ಣಿಸಿದರು. ವಿಶ್ವಕರ್ಮರ ಆಶೀರ್ವಾದದೊಂದಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಇಂದು ಪ್ರಾರಂಭಿಸಲಾಗಿದೆ. ಯೋಜನೆಯು ಲಕ್ಷಾಂತರ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಕುಟುಂಬಗಳಿಗೆ ಭರವಸೆಯ ಹೊಸ ಕಿರಣವಾಗಲಿದೆ ಎಂದು ಹೇಳಿದರು.

2 ಲಕ್ಷದವರೆಗೆ ಸಾಲ: ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 2 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ. ಸರ್ಟಿಫಿಕೆಟ್‌, ಐಡಿ ಕಾರ್ಡ್‌ಗಳ ಆಧಾರದ ಮೇಲೆ ವಿಶ್ವಕರ್ಮ ಯೋಜನೆಗೆ ಆಯಾ ವರ್ಗಗಳಿಂದ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಸಾಲವಾಗಿ ಶೇಕಡಾ 5 ರ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಆನಂತರ ಎರಡನೇ ಹಂತದಲ್ಲಿ ಮತ್ತೊಂದು ಲಕ್ಷ ಸಿಗಲಿದೆ. ಕರ್ಮಿಗಳು ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡು ಟೂಲ್‌ಕಿಟ್ ಇನ್ಸೆಂಟಿವ್, ಡಿಜಿಟಲ್ ವಹಿವಾಟುಗಳು, ವ್ಯಾಪಾರವನ್ನು ಉತ್ತೇಜಿಸಲು ಸಾಧ್ಯವಾಗುವಂತೆ ಈ ಸಾಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ತರಬೇತಿ ವೇಳೆ 500 ರೂಪಾಯಿ:ವಿಶ್ವಕರ್ಮ ಯೋಜನೆಯಡಿ ಆಯ್ಕೆಯಾದವರಿಗೆ 2 ಹಂತದಲ್ಲಿ ಸ್ಕಿಲ್​ ಡೆವಲಪ್​ಮೆಂಟ್​ ತರಬೇತಿ ನೀಡಲಾಗುತ್ತದೆ. ತರಬೇತಿಯ ವೇಳೆ ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಸಹ ಆರ್ಥಿಕ ನೆರವೂ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏನೆಲ್ಲಾ ದಾಖಲೆಗಳು ಬೇಕು:ವಿಶ್ವಕರ್ಮ ಯೋಜನೆಗೆ ಆಯ್ಕೆಯಾಗಲು ಆಧಾರ ಕಾರ್ಡ್, ಗುರುತಿನ ಚೀಟಿ, ವಿಳಾಸ ದಾಖಲೆ, ಮೊಬೈಲ್ ಸಂಖ್ಯೆ, ಜಾತಿ ದೃಢೀಕರಣ ದಾಖಲೆ, ಬ್ಯಾಂಕ್ ಖಾತೆ ಪಾಸ್ ಬುಕ್, ಪಾಸ್‌ಪೋರ್ಟ್ ಸೈಜಿನ ಫೋಟೋಗಳು ಅಗತ್ಯ.

ಇದನ್ನೂ ಓದಿ:'ಪಿಎಂ ವಿಶ್ವಕರ್ಮ ಯೋಜನೆ'ಗೆ ಇಂದು ಚಾಲನೆ ನೀಡಲಿದ್ದಾರೆ ಮೋದಿ: ₹13,000 ಕೋಟಿ ಅನುದಾನ

ABOUT THE AUTHOR

...view details