ನವದೆಹಲಿ: ಗುರು ಗೋವಿಂದ ಸಿಂಗ್ ಜಯಂತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಿಖ್ ಸಮುದಾಯದವರಿಗೆ ಶುಭಕೋರಿದ್ದಾರೆ.
ಈ ಹಿಂದೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್ 350ನೇ ಪ್ರಕಾಶ ಪರ್ವದಲ್ಲಿ ಪಾಲ್ಗೊಂಡು ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು.
ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ. ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಿಖ್ಖರ 10ನೇ ಗುರು, ಗುರು ಗೋವಿಂದ ಸಿಂಗ್ ಅವರ 355ನೇ ಪ್ರಕಾಶ್ ಪರ್ವದಲ್ಲಿ ಅವರಿಗೆ ನಮಸ್ಕರಿಸುತ್ತೇನೆ. ಅವರು ಧೈರ್ಯ, ಸಹಾನುಭೂತಿ ಮತ್ತು ಉದಾರತೆಯ ಪ್ರತಿರೂಪವಾಗಿದ್ದರು.
ದೀನ, ದಲಿತರ ಸೇವೆಗಾಗಿ ಅವರ ಪ್ರಯತ್ನಗಳು ಪ್ರಪಂಚಾದ್ಯಂತ ವ್ಯಾಪಕವಾಗಿ ಗೌರವಿಸಲ್ಪಟ್ಟಿವೆ. ಅವರ ಬೋಧನೆ ಮತ್ತು ತ್ಯಾಗಕ್ಕೆ ನಮ್ಮ ಸಮಾಜ ಋಣಿಯಾಗಿರುತ್ತದೆ ಎಂದಿದ್ದಾರೆ.