ನವದೆಹಲಿ: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿನಿ ನಟ ನಟಿಯರು, ಕ್ರಿಕೆಟಿಗರು ಹೀಗೆ ಎಲ್ಲ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಮೋ ಟ್ವೀಟ್
ಪ್ರಧಾನಿ ಮೋದಿ, ವಿಧಿಯ ಕ್ರೂರ ತಿರುವು ಪುನೀತ್ ರಾಜ್‌ಕುಮಾರ್ ಎಂಬ ಸಮೃದ್ಧ ಹಾಗೂ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಅವರದ್ದು, ಸಾವಿನ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಸಿನಿಮಾಗಳು ಮತ್ತು ಅದ್ಭುತ ವ್ಯಕ್ತಿತ್ವವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕನ್ನಡದಲ್ಲೇ ಟ್ವೀಟ್ ಮಾಡಿದ ಅಮಿತ್ ಶಾ
ನೆಚ್ಚಿನ ನಟನ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪುನೀತ್ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಂಬನಿ ಮಿಡಿದಿದ್ದು, ಪುನೀತ್ ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಗಳಿಗೆ ನನ್ನ ಹೃದಯಸ್ಪರ್ಶಿ ಸಂತಾಪಗಳು ಎಂದು ಟ್ಟಿಟರ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
'ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ'
ಕನ್ನಡದ ದಿ.ರಾಜ್‌ಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದ ಬಗ್ಗೆ ಕೇಳಿ ತೀವ್ರ ಆಘಾತ ಮತ್ತು ದಿಗ್ಭ್ರಮೆಯಾಗಿದೆ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿದ್ದವು. ಹೀಗಾಗಿ ಪುನೀತ್ ಅವರ ಸಾವು ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.