ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಘೋಷಣೆಯಾಗಿದೆ. ಕಳೆದೊಂದು ವರ್ಷದಲ್ಲಿ ₹26.13 ಲಕ್ಷದಷ್ಟು ಚರಾಸ್ತಿ ಏರಿಕೆಯಾಗಿದೆ. ಸದ್ಯ ಅವರ ಬಳಿ ₹2.23 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ತಿಳಿದು ಬಂದಿದೆ.
2021ರ ಮಾರ್ಚ್ 31ರ ಮಾಹಿತಿ ಪ್ರಕಾರ, ಮೋದಿ ಅವರಲ್ಲಿ ₹1.1 ಕೋಟಿ ಮೌಲ್ಯದ ಆಸ್ತಿ ಇತ್ತು. ಆದರೀಗ ₹2.23 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಬಹುಪಾಲು ಬ್ಯಾಂಕ್ ಠೇವಣಿ ಆಗಿದೆ. ಗುಜರಾತ್ನ ಗಾಂಧಿನಗರದಲ್ಲಿರುವ ಅವರ ಪಾಲಿನ ವಸತಿ ಭೂಮಿ ದಾನ ಮಾಡಿರುವ ಕಾರಣ ಯಾವುದೇ ರೀತಿಯ ಸ್ಥಿರಾಸ್ತಿ ಹೊಂದಿಲ್ಲ.
ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಮೋದಿ ಹೂಡಿಕೆ ಮಾಡಿಲ್ಲ. ಸ್ವಂತ ವಾಹನ ಅವರಲ್ಲಿಲ್ಲ. ₹1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಚೇರಿ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ.
ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರ ಅಕ್ಟೋಬರ್ ತಿಂಗಳಲ್ಲಿ ಇತರೆ ಮೂವರೊಂದಿಗೆ ಸೇರಿ ಮೋದಿ ವಸತಿ ಪ್ಲಾಟ್ ಖರೀದಿಸಿದ್ದರು. ಆದರೆ, ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ, ಮೋದಿ ಅವರ ಮಾಲೀಕತ್ವ ಅದರ ಮೇಲಿಲ್ಲ. ಮಾರ್ಚ್ 31, 2022 ರ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿಯವರ ಕೈಯಲ್ಲಿ ₹35,250 ನಗದು, ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೂಲಕ ₹ 9,05,105 ಉಳಿತಾಯ ಹಣವಿದೆ. ₹1,89,305 ಮೌಲ್ಯದ ಜೀವ ವಿಮಾ ಪಾಲಿಸಿಗಳಿವೆ.
ಇದನ್ನೂ ಓದಿ:ಇದಾವ ನ್ಯಾಯ?: 3 ವರ್ಷದಲ್ಲಾದ ನೆರೆ ಹಾನಿ ₹78,395 ಕೋಟಿ; ಕೊಟ್ಟ ಪರಿಹಾರ ಕೇವಲ ₹10,826 ಕೋಟಿ!
ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳ ಪೈಕಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಮಾರ್ಚ್ 31, 2022 ರ ಮಾಹಿತಿ ಪ್ರಕಾರ, ₹2.54 ಕೋಟಿ ಮೌಲ್ಯದ ಚರ ಮತ್ತು 2.97 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇವರು ಹೊಂದಿದ್ದಾರೆ. 29 ಕ್ಯಾಬಿನೆಟ್ ಮಂತ್ರಿಗಳಲ್ಲಿ ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ, ಆರ್.ಕೆ.ಸಿಂಗ್, ಹರ್ದೀಪ್ ಸಿಂಗ್ ಪುರಿ, ಪರ್ಶೋತ್ತಮ್ ರೂಪಲಾ ಮತ್ತು ಜಿ.ಕಿಶನ್ ರೆಡ್ಡಿ ಕೂಡ ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.