ಕರ್ನಾಟಕ

karnataka

ETV Bharat / bharat

ಗುಜರಾತ್ ಶಾಲೆಯಲ್ಲಿ ಮಕ್ಕಳಿಗೆ ನೀರಜ್ ಚೋಪ್ರಾ ತರಬೇತಿ: ವಿಡಿಯೋ ಹಂಚಿಕೊಂಡ ಮೋದಿ

ಅಹಮದಾಬಾದ್​​ನ ಸಂಸ್ಕೃತಧಾಮ ಶಾಲೆಯಲ್ಲಿ ಒಲಿಂಪಿಯನ್‌ ಅಥ್ಲೀಟ್‌ ನೀರಜ್ ಚೋಪ್ರಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಜಾವೆಲಿನ್ ಎಸೆತ, ವಾಲಿಬಾಲ್ ಮತ್ತು ಬಿಲ್ಲುಗಾರಿಕೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಮಕ್ಕಳೊಂದಿಗೆ ಆಡುತ್ತಾ, ಪ್ರೋತ್ಸಾಹ ನೀಡಿದರು.

pm modi shares videos of Olympian Neeraj Chopra
ಗುಜರಾತ್ ಶಾಲೆಯಲ್ಲಿ ಮಕ್ಕಳಿಗೆ ನೀರಜ್ ಚೋಪ್ರಾ ತರಬೇತಿ: ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

By

Published : Dec 5, 2021, 9:08 AM IST

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ದೇಶದ ಹೆಮ್ಮೆಯ ಕ್ರೀಡಾಪಟು ನೀರಜ್ ಚೋಪ್ರಾ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಶಾಲೆಯೊಂದರಲ್ಲಿ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಜೊತೆ ಸಮಯ ಕಳೆಯುತ್ತಿರುವ, ತರಬೇತಿ ನೀಡುತ್ತಿರುವ ವಿಡಿಯೋ ಹಾಗು ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಯುವ ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ನೀರಜ್ ಚೋಪ್ರಾ ಶ್ರಮಿಸುತ್ತಿದ್ದಾರೆ. ಅವರ ಇಂತಹ ಪ್ರಯತ್ನಗಳು ಕ್ರೀಡೆ ಮತ್ತು ಫಿಟ್ನೆಸ್ ಕಡೆಗೆ ಯುವ ಕ್ರೀಡಾಳುಗಳಿಗೆ ಇರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತವೆ' ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ನೀರಜ್ ಚೋಪ್ರಾ ಅವರು ಶನಿವಾರ ಅಹಮದಾಬಾದ್​​ನ ಸಂಸ್ಕೃತಧಾಮ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಜಾವೆಲಿನ್ ಎಸೆತ, ವಾಲಿಬಾಲ್ ಮತ್ತು ಬಿಲ್ಲುಗಾರಿಕೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಮಕ್ಕಳೊಂದಿಗೆ ಆಡಿದರು. ಇದೇ ವೇಳೆ, ಫಿಟ್‌ನೆಸ್‌ ಮತ್ತು ಆಹಾರದ ಮಹತ್ವ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದರು. ಈ ವಿಡಿಯೋವನ್ನು ಸಂಸ್ಕೃತಧಾಮ ಶಾಲೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದೇ ವಿಡಿಯೋವನ್ನು ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಶೇರ್‌ ಮಾಡಿದ್ದಾರೆ.

'ವೆಜ್​ ಬಿರಿಯಾನಿ ಇಷ್ಟ'

ವಿದ್ಯಾರ್ಥಿಗಳೊಂದಿಗೆ ಸಂವಾದದ ವೇಳೆಯಲ್ಲಿ ಇಷ್ಟದ ಖಾದ್ಯದ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸಿರುವ ಅವರು, 'ನನಗೆ ವಿವಿಧ ರೀತಿಯ ಹಣ್ಣುಗಳು ಇಷ್ಟ. ಮಸಾಲೆ ಬೆರೆಸದೇ ಮಾಡುವ ತರಕಾರಿ ಬಿರಿಯಾನಿಯನ್ನು ಮೊಸರಿನೊಂದಿಗೆ ತಿನ್ನಲು ಇಷ್ಟಪಡುತ್ತೇನೆ' ಎಂದರು. ಇದರ ಜೊತೆಗೆ, ಕ್ರೀಡಾಪಟುಗಳು ಆಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.

ಇದನ್ನೂ ಓದಿ:ಸರ್ಕಾರದಿಂದ ಘುಮನ್ಹೇರಾ ಕ್ರೀಡಾಂಗಣದಲ್ಲಿ ಹಾಕಿ ಅಕಾಡೆಮಿ ಸ್ಥಾಪನೆ: ಸಿಸೋಡಿಯಾ

ABOUT THE AUTHOR

...view details