ಕರ್ನಾಟಕ

karnataka

ETV Bharat / bharat

ಮೋದಿ ವರ್ಷದ ಕೊನೆಯ 'ಮನ್​ ಕಿ ಬಾತ್': ಬೆಳಗ್ಗೆ 11ರಿಂದ ಕೇಳಿ.. - ದೇಶದ ಬುಡಕಟ್ಟು ಜನಾಂಗ

2022ನೇ ವರ್ಷ ಕೊನೆಯಾಗುತ್ತಿದೆ. ಇಂದು ಬೆಳಗ್ಗೆ ವರ್ಷದ ಕೊನೆಯ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮೋದಿ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ದೇಶದ ಸಂಗೀತ ಪರಂಪರೆ, ಸಂಪ್ರದಾಯಗಳ ಶೀಮಂತಿಕೆಯನ್ನು ಅವರು ಪ್ರಸ್ತುತಪಡಿಸಿದ್ದರು. ಈ ಬಾರಿ ಯಾವುದರ ಬಗ್ಗೆ ಮಾತನಾಡಬಹುದು ಎಂಬ ಕುತೂಹಲವೂ ಇದೆ.

PM Narendra Modi
ಪ್ರಧಾನಿ ನರೇಂದ್ರ ಮೋದಿ

By

Published : Dec 25, 2022, 10:04 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಇದು ಮಾಸಿಕ ಕಾರ್ಯಕ್ರಮದ 96ನೇ ಆವೃತ್ತಿಯಾಗಿದ್ದು, 2022 ರ ಕೊನೆಯ ಮನ್ ಕಿ ಬಾತ್ ಕೂಡಾ ಹೌದು. ಇಂದು ನಡೆಯಲಿರುವ ಬಾನುಲಿ​ ಕಾರ್ಯಕ್ರಮಕ್ಕಾಗಿ ತಮ್ಮ ಸಂದೇಶಗಳನ್ನು ಆ್ಯಪ್​ಗಳ ಮೂಲಕ ಹಂಚಿಕೊಳ್ಳುವಂತೆ ಡಿ.13ರಂದು ಮೋದಿ ಜನರಲ್ಲಿ ಕೇಳಿಕೊಂಡಿದ್ದರು.

MyGov ಮೂಲಕ ಸಲಹೆಗಳನ್ನು ಆಹ್ವಾನಿಸಿದ್ದ ಪ್ರಧಾನಿ, '2022 ರ ಕೊನೆಯ #MannKiBaat ಈ ತಿಂಗಳ 25 ರಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಇನ್‌ಪುಟ್ ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. NaMo, MyGov ಆ್ಯಪ್​ನಲ್ಲಿ ಬರೆಯಲು ಅಥವಾ 1800-11-7800 ಕ್ಕೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಲು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ' ಎಂದು ಟ್ವೀಟ್​ ಮಾಡಿದ್ದರು.

ಮನ್‌ ಕಿ ಬಾತ್‌ ಕೇಳುವುದು ಹೇಗೆ?: ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ, ಎಐಆರ್​​ ನ್ಯೂಸ್ ವೆಬ್‌ಸೈಟ್ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲೂ ನೇರ ಪ್ರಸಾರವಿರಲಿದೆ. ಹಿಂದಿ ಭಾಷೆಯಲ್ಲಿ ಪ್ರಸಾರದ ನಂತರ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೋ ಪ್ರಸಾರ ಮಾಡುತ್ತದೆ.

ಹಿಂದಿನ ಆವೃತ್ತಿಯಲ್ಲಿ ಮೋದಿ ಹೇಳಿದ್ದೇನು​?: ಈ ಹಿಂದೆ ಅಂದರೆ, ನ.30 ರಂದು ನಡೆದ ಮನ್​ ಕಿ ಬಾತ್​ 95 ನೇ ಆವೃತ್ತಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ಸಂಸ್ಕೃತಿ, ಸಂಗೀತ, ಸಂಪ್ರದಾಯಗಳ ಪರಂಪರೆ, ಅವುಗಳು ವಿದೇಶಗಳಲ್ಲಿ ಮಹತ್ವ ಪಡೆದಿರುವ ರೀತಿಯನ್ನು ಹಾಡಿ ಹೊಗಳಿದ್ದರು. ಅದರಲ್ಲೂ ಭಾರತೀಯ ಸಂಗೀತ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಯಾವ ರೀತಿ ಜನರನ್ನು ತನ್ನತ್ತ ಸೆಳೆದುಕೊಂಡಿದೆ ಎಂಬುದನ್ನು ಮೋದಿ ಒತ್ತಿ ಹೇಳಿದ್ದರು.

ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಸಂದರ್ಭ ಬಾಪು ಅವರ ನೆಚ್ಚಿನ ಹಾಡನ್ನು ಹಾಡಿರುವ ಗ್ರೀಸ್‌ನ ಗಾಯಕ ಕಾನ್‌ಸ್ಟಾಂಟಿನೋಸ್ ಕಲೈಟ್ಜಿಸ್ ಕುರಿತು ಪ್ರಧಾನ ಮಂತ್ರಿ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು. ಈ ಗಾಯಕನಿಗೆ ಭಾರತದ ಬಗ್ಗೆ ತುಂಬಾ ಪ್ರೀತಿ ಇದೆ. ಕಳೆದ 42 ವರ್ಷಗಳಲ್ಲಿ ಬಹುತೇಕ ಪ್ರತಿ ವರ್ಷ ಅವರು ಭಾರತಕ್ಕೆ ಬಂದಿದ್ದಾರೆ. ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗ, ತಾಳ, ರಸಗಳು ವಿವಿಧ ಘರಾನಾಗಳನ್ನು ಅಧ್ಯಯನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹೃದಯ ತುಂಬಿ ಬರುವ ಸಂಗತಿಗಳಿವು..: ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನೇಕ ಮಹಾನ್ ವ್ಯಕ್ತಿಗಳು ನೀಡಿರುವ ಕೊಡುಗೆಯನ್ನು ಅಧ್ಯಯನ ಮಾಡಿದ್ದಾರೆ. ಭಾರತದ ಶಾಸ್ತ್ರೀಯ ನೃತ್ಯಗಳ ವಿವಿಧ ಅಂಶಗಳನ್ನು ಸಹ ಹತ್ತಿರದಿಂದ ಅರ್ಥಮಾಡಿಕೊಂಡಿರುವ ಅವರು ಈ ಎಲ್ಲಾ ಅನುಭವಗಳನ್ನು ಬಹಳ ಸುಂದರವಾಗಿ ಒಂದು ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಭಾರತೀಯ ಸಂಗೀತ ಎಂಬ ಅವರ ಪುಸ್ತಕದಲ್ಲಿ ಸುಮಾರು 760 ಚಿತ್ರಗಳಿವೆ. ಇತರ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ಇಂತಹ ಉತ್ಸಾಹ ಮತ್ತು ಆಕರ್ಷಣೆಯನ್ನು ನೋಡಿದರೆ ನಿಜಕ್ಕೂ ಹೃದಯ ತುಂಬಿ ಬರುತ್ತದೆ ಮೋದಿ ಎಂದು ಉದ್ಘರಿಸಿದ್ದರು.

ಭಾರತದಲ್ಲಿರುವುದೇ ನಮ್ಮ ಅದೃಷ್ಟ: ಕಳೆದ ಎಂಟು ವರ್ಷಗಳಲ್ಲಿ, ಭಾರತದಿಂದ ಸಂಗೀತ ಉಪಕರಣಗಳ ರಫ್ತು ಮೂರೂವರೆ ಪಟ್ಟು ಹೆಚ್ಚಾಗಿದೆ. ಅದೇ ಜಾಗದಲ್ಲಿ ಎಲೆಕ್ಟ್ರಿಕಲ್ ಮ್ಯೂಸಿಕಲ್ ಇನ್​ಸ್ಟ್ರುಮೆಂಟ್ಸ್​ಗಳ ರಫ್ತು 60 ಪಟ್ಟು ಜಾಸ್ತಿಯಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ಬಗೆಗಿನ ವ್ಯಾಮೋಹ ಎಲ್ಲೆಡೆ ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿ. ಭಾರತೀಯ ಸಂಗೀತ ವಾದ್ಯಗಳ ಬಹುದೊಡ್ಡ ಖರೀದಿದಾರರು ಎಂದರೆ ಯುಎಸ್ಎ, ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಯುಕೆಯಂತಹ ಅಭಿವೃದ್ಧಿ ಹೊಂದಿದೆ ದೇಶಗಳು. ಸಂಗೀತ, ನೃತ್ಯ ಮತ್ತು ಕಲೆಯ ಶ್ರೀಮಂತ ಪರಂಪರೆಯುಳ್ಳ ಭಾರತದಂತಹ ದೇಶದಲ್ಲಿ ನಾವಿದ್ದೇವೆ ಎನ್ನುವುದೇ ನಮ್ಮ ಅದೃಷ್ಟ ಎಂದು ಹೆಮ್ಮೆಯ ಮಾತುಗಳನ್ನಾಡಿದ್ದರು.

‘ನೀತಿ ಶತಕ’ ಬರೆದ ಶ್ರೇಷ್ಠ ಋಷಿ ಕವಿ ಭರ್ತ್ರಿಹರಿ ನಮಗೆಲ್ಲರಿಗೂ ಗೊತ್ತು. ಅವರು 'ಕಲೆ, ಸಂಗೀತ, ಸಾಹಿತ್ಯದೆಡೆಗಿನ ಬಾಂಧವ್ಯವೇ ಮಾನವೀಯತೆಯ ನಿಜವಾದ ಅಸ್ಮಿತೆ' ಎಂದು ವಚನವೊಂದರಲ್ಲಿ ಹೇಳುತ್ತಾರೆ. ವಾಸ್ತವವಾಗಿ ಹೇಳಬೇಕೆಂದರೆ ನಮ್ಮ ಸಂಸ್ಕೃತಿ ಅದನ್ನು ಮಾನವೀಯತೆಯಿಂದ ಮೇಲೆ ದೈವತ್ವಕ್ಕೆ ಕೊಂಡೊಯ್ಯುತ್ತದೆ. ವೇದಗಳಲ್ಲಿ ಸಾಮವೇದವನ್ನು ನಮ್ಮ ವೈವಿಧ್ಯಮಯ ಸಂಗೀತದ ಮೂಲ ಎಂದು ಕರೆಯಲಾಗಿದೆ. ಅದು ಸರಸ್ವತಿಯ ವೀಣೆಯಾಗಿರಲಿ, ಭಗವಾನ್ ಕೃಷ್ಣನ ಕೊಳಲು ಆಗಿರಲಿ, ಭೋಲೇನಾಥನ ಡಮರು ಆಗಿರಲಿ, ನಮ್ಮ ದೇವರು ಮತ್ತು ದೇವತೆಗಳೂ ಸಂಗೀತದ ಜೊತೆ ಜೊತೆಗೆ ಇದ್ದಾರೆ. ನಾವು ಭಾರತೀಯರು ಎಲ್ಲದರಲ್ಲೂ ಸಂಗೀತವನ್ನು ಕಾಣುತ್ತೇವೆ. ನದಿಯ ಕಲರವ, ಮಳೆಹನಿ, ಹಕ್ಕಿಗಳ ಚಿಲಿಪಿಲಿ ಅಥವಾ ಗಾಳಿಯ ಪ್ರತಿಧ್ವನಿಸುವಿಕೆ, ಸಂಗೀತ ನಮ್ಮ ನಾಗರಿಕತೆಯ ಎಲ್ಲೆಡೆ ಇದೆ. ಹಾಗಾಗಿ ಸಂಗೀತ ದೇಹ, ಮನಸ್ಸಿಗೆ ಉಲ್ಲಾಸ ನೀಡುವುದು ಮಾತ್ರವಲ್ಲ ನಮ್ಮ ಸಮಾಜವನ್ನು ಬೆಸೆಯುತ್ತದೆ ಎಂದು ಹೇಳಿದ್ದರು.

ನಮ್ಮ ದೇಶದ ಬುಡಕಟ್ಟು ಜನಾಂಗದಲ್ಲಿ ವಿಭಿನ್ನ ಸಂಗೀತ ಸಂಪ್ರದಾಯಗಳಿವೆ. ಸಂಗೀತ ಮತ್ತು ಪ್ರಕೃತಿಯ ಜೊತೆಗೆ ಪರಸ್ಪರ ಸಾಮರಸ್ಯದಿಂದ ಬದುಕಲು ಈ ಜನಾಂಗಗಳು ನಮಗೆ ಪ್ರೇರಣೆ. ನಮ್ಮ ಶ್ರೀಮಂತವಾಗಿರುವ ಸಂಗೀತದ ಪ್ರಕಾರಗಳು ಮಾತ್ರವಲ್ಲ, ಸಂಸ್ಕೃತಿ ಕೂಡ ವಿಶ್ವದ ಸಂಗೀತದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ಭಾರತೀಯ ಸಂಗೀತದ ಖ್ಯಾತಿಯು ಪ್ರಪಂಚದ ಮೂಲೆ ಮೂಲೆಗೆ ಹರಡಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಎಲ್ಲರೂ ಒಂದೇ ರೀತಿಯ ಮುಂದಾಳತ್ವವನ್ನು ಕೈಗೊಂಡು ತಮ್ಮ ತಮ್ಮ ಪ್ರದೇಶಗಳ ಸಾಂಸ್ಕೃತಿಕ ಶೈಲಿಗಳು, ಸಂಪ್ರದಾಯಗಳ ರಕ್ಷಣೆಗೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ:ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ 'ಮನ್​ ಕಿ ಬಾತ್' ಬಾನುಲಿ​ ಕಾರ್ಯಕ್ರಮ

ABOUT THE AUTHOR

...view details