ಭೋಪಾಲ್ : ಇಲ್ಲಿನ ವಯೋವೃದ್ಧೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ತನ್ನ ಸ್ವಂತ ಮಗ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಇವರ ಪುತ್ರಪ್ರೀತಿ ಇಷ್ಟಕ್ಕೇ ಸೀಮಿತವಾಗಿಲ್ಲ, ತನ್ನ ಆಸ್ತಿಯನ್ನು ಮೋದಿಯವರ ಹೆಸರಿಗೆ ಬರೆಯುವುದು ಕೂಡ ಇವರ ಇಚ್ಛೆಯಾಗಿದೆ. ಮಧ್ಯಪ್ರದೇಶದ ರಾಜಗಢ ನಿವಾಸಿಯಾಗಿರುವ 100 ವರ್ಷದ ವೃದ್ಧೆ ಮಾಂಗಿ ಬಾಯಿ ತಂವರ್ ತನ್ನ 25 ಬಿಘಾ ಜಮೀನನ್ನು ಪ್ರಧಾನಿ ಮೋದಿ ಹೆಸರಿಗೆ ಬರೆಯಲು ತಯಾರಾಗಿರುವುದು ಅಚ್ಚರಿ ಮೂಡಿಸಿದೆ.
ಸಾಯುವ ಮುನ್ನ ಒಂದು ಬಾರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ಈಕೆಯ ಮಹದಾಸೆಯಾಗಿದೆ. ಮೋದಿಯವರ ಬಗ್ಗೆ ವೃದ್ಧೆ ಹೇಳುವ ಮಾತುಗಳು ಹೀಗಿವೆ: "ಮೋದಿಜಿ ನನ್ನ ಮಗ. ಮೋದಿಯವರೇ ನನಗೆ ಮನೆ ನೀಡಿದ್ದಾರೆ, ನನಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಧಾನ್ಯ ಖರೀದಿಸಲು ಹಣ ಕೂಡ ನೀಡುತ್ತಿದ್ದಾರೆ. ಮೋದಿಯವರ ಸಹಾಯದಿಂದಲೇ ನಾನು ತೀರ್ಥಯಾತ್ರೆ ಮಾಡಿದ್ದೇನೆ" ಎನ್ನುತ್ತಾರೆ ಮಹಿಳೆ. ಈ ಮಾತುಗಳನ್ನಾಡಿರುವ ವೃದ್ಧೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
100 ವರ್ಷ ಪೂರೈಸುತ್ತಿರುವ ವಯೋವೃದ್ಧ ಮಾಂಗಿ ಬಾಯಿ, ರಾಜ್‌ಗಢ್ ಜಿಲ್ಲಾ ಕೇಂದ್ರದಿಂದ 65 ಕಿಮೀ ದೂರದಲ್ಲಿರುವ ಹರಿಪುರ ಜಾಗೀರ್ ಗ್ರಾಮದ ನಿವಾಸಿ. ಮಾಂಗಿ ಬಾಯಿಗೆ 14 ಮಕ್ಕಳಿದ್ದಾರೆ. ಆದರೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಕೆ ತನ್ನ ಮಗ ಕೇವಲ ಪ್ರಧಾನಿ ಮೋದಿ ಎಂದು ಹೇಳುತ್ತಿರುವುದು ಕಾಣಿಸುತ್ತದೆ. ಮಾಂಗಿ ಬಾಯಿ ಅವರು ಇಲ್ಲಿಯವರೆಗೆ ಪ್ರಧಾನಿ ಮೋದಿಯನ್ನು ಟಿವಿಯಲ್ಲಿ ಮಾತ್ರ ನೋಡಿದ್ದಾರೆ. ಜೀವನದಲ್ಲಿ ಒಂದು ಬಾರಿ ನಿಜವಾಗಿಯೂ ಅವರನ್ನು ಭೇಟಿಯಾಗಲು ಬಯಸುತ್ತಿದ್ದಾರೆ. ತನಗೆ ವಿಧವಾ ಪಿಂಚಣಿ ಕೊಟ್ಟವರು, ಜೀವನೋಪಾಯಕ್ಕೆ ಅನುಕೂಲ ಮಾಡಿ ಕೊಟ್ಟಿದ್ದು ನರೇಂದ್ರ ಮೋದಿ ಎಂಬುದು ಆಕೆಯ ನಿಲುವಾಗಿದೆ.