ನವದೆಹಲಿ:2024ರ ಭಾರತ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಆಹ್ವಾನಿಸಲಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಬುಧವಾರ (ನಿನ್ನೆ) ತಿಳಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡಿರುವ ಜಿ20 ಶೃಂಗಸಭೆಯಲ್ಲಿ ಉಭಯ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 2024ರ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದಾರೆ ಎಂದು ರಾಯಭಾರಿ ಹೇಳಿದರು.
ಶೃಂಗಸಭೆಯಲ್ಲಿ ಭಾರತ-ಅಮೆರಿಕ ನಡುವೆ ಬಾಕಿ ಉಳಿದಿರುವ 7ನೇ ಮತ್ತು ಕೊನೆಯ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಪ್ರಮುಖವಾಗಿ, ಮೋದಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಈ ಹಿಂದಿನ 6 ವಿವಾದಗಳನ್ನು ಪರಿಹರಿಸಲಾಗಿತ್ತು.
ಜಿ20 ವೇಳೆ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ನಿರಂತರ ಪಾಲುದಾರಿಕೆಯನ್ನು ಮೋದಿ ಪುನರುಚ್ಚರಿಸಿದ್ದಾರೆ. ಬಹುಮುಖ ಜಾಗತಿಕ ಕಾರ್ಯಸೂಚಿಯ ಎಲ್ಲಾ ಆಯಾಮಗಳಲ್ಲಿ ಭಾರತ-ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಉಭಯ ನಾಯಕರು ನಿರ್ಧರಿಸಿದ್ದಾರೆ. ರಾಷ್ಟ್ರಗಳ ನಡುವಿನ ಈ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ ಎಂದು ರಾಯಭಾರಿ ತಿಳಿಸಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮುಖ್ಯ ಅತಿಥಿಯಾಗಿ ವಾಲ್ಗೊಂಡಿದ್ದರು. 2015ರಲ್ಲಿ, ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೊದಲ ಅಮೆರಿಕ ಅಧ್ಯಕ್ಷರಾಗಿದ್ದಾರೆ. ಇದೀಗ ಜೋ ಬೈಡನ್ 2ನೇ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. (ಎಎನ್ಐ)
ಭಾರತದ ಅಧ್ಯಕ್ಷತೆಯಲ್ಲಿ 18ನೇ ಜಿ20 ಶೃಂಗಸಭೆಯು ನವದೆಹಲಿಯಲ್ಲಿ ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಶೃಂಗಸಭೆಯ ಕೊನೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇಗ್ನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಮುಂದಿನ ಅಧ್ಯಕ್ಷತೆಯನ್ನು ಹಸ್ತಾಂತರಿಸಿದ್ದಾರೆ. ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ವರ್ಷಪೂರ್ತಿ ನಡೆದ 200ಕ್ಕೂ ಅಧಿಕ ಸಭೆಗಳಲ್ಲಿ 112ಕ್ಕೂ ಅಧಿಕ ಘೋಷಣೆಗಳನ್ನು ಹೊರಡಿಸಲಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತವು ಇಂಡೋನೇಷ್ಯಾದಿಂದ ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿತ್ತು. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಶೃಂಗಸಭೆಯು ಯಾವುದೇ ದೊಡ್ಡ ಮಟ್ಟದ ಘೋಷಣೆಗಳಿಲ್ಲದೆ ಮುಗಿಯಲಿದೆ ಎಂದು ತಜ್ಞರು ಊಹಿಸಿದ್ದರು. ಆದರೆ, ಇದೆಲ್ಲವನ್ನೂ ಮೀರಿದ ಯಶಸ್ಸು ಭಾರತ ಮುನ್ನಡೆಸಿದ ಜಿ20 ಶೃಂಗಸಭೆಗೆ ಸಿಕ್ಕಿದೆ.
ಇದನ್ನೂ ಓದಿ:ಭಾರತ - ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್: ಮುಂಬರುವ ಚುನಾವಣೆಗಳಲ್ಲಿ ಮೋದಿ- ಬೈಡನ್‌ಗೆ ಲಾಭ ತರುವುದೇ?