ನವದೆಹಲಿ:ಹರಿಯಾಣದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫ್ರೆನ್ಸ್ ಮೂಲಕ ದೆಹಲಿಯಿಂದಲೇ ಉದ್ಘಾಟಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಪ್ರಗತಿಯ ವಿಚಾರದಲ್ಲಿ ತಳಮಟ್ಟದ ಅಧಿಕಾರ ವಿಕೇಂದ್ರೀಕರಣ ಅಗತ್ಯವಾಗಿದೆ. ಈ ಬಗ್ಗೆ ಕಾಂಗ್ರೆಸ್ಗೆ ಗೊತ್ತಿಲ್ಲ. ವಿಪಕ್ಷಗಳು ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿವೆ ಎಂದು ಟೀಕಿಸಿದರು.
ಯಾವುದೇ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಜಿಲ್ಲಾ ಪಂಚಾಯತ್‌ಗಳಿಗೆ ಅಪಾರ ಶಕ್ತಿ ಇದೆ. ಗ್ರಾಮಗಳಲ್ಲಿ ಪಂಚಾಯತ್ ರಾಜ್ ಜಾರಿ ಮಾಡುವುದು ಎಷ್ಟು ಮುಖ್ಯ ಎಂದು ಕಾಂಗ್ರೆಸ್ಗೆ ಗೊತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸಲು ಏನನ್ನೂ ಮಾಡಲಿಲ್ಲ. ಮಾಡಿದ ತುಸು ಕೆಲಸವೂ ಕಾಗದಗಳಲ್ಲಿ ಮಾತ್ರ ಉಳಿದುಕೊಂಡಿದೆ. ಇದಕ್ಕೆ ದಿಡ್ಡ ಉದಾಹರಣೆಯೆಂದರೆ ಅದು ಜಮ್ಮು ಮತ್ತು ಕಾಶ್ಮೀರವಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದು 4 ದಶಕಗಳು ಕಳೆದರೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡಿರಲಿಲ್ಲ. ಗ್ರಾಮಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರುವುದು ಎಷ್ಟು ಅಗತ್ಯ ಎಂದು ಕಾಂಗ್ರೆಸ್ಗೆ ಆಗ ಅರ್ಥವಾಗಿರಲಿಲ್ಲ. ಇದಾದ ಬಳಿಕ ರಚಿತವಾದ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಕಾಂಗ್ರೆಸ್ ಆಡಳಿತದಲ್ಲಿ ತನ್ನ ಹೊಳಪನ್ನೇ ಪಡೆದಿರಲಿಲ್ಲ ಎಂದು ಪ್ರಧಾನಿ ದೂಷಿಸಿದರು.
ಗ್ರಾಮಗಳಲ್ಲಿ 2 ದಿನ ವಾಸ್ತವ್ಯ ಮಾಡಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪಂಚಾಯತ್ ರಾಜ್ ವ್ಯವಸ್ಥೆಯ ಲಾಭ ಸಿಗಬೇಕು. ಜಾರಿ ಮಾಡಲಾದ ಪಂಚಾಯತ್ ರಾಜ್ ಪರಿಷತ್ನ ಸದಸ್ಯರು ವಾರದಲ್ಲಿ 2 ದಿನ ಸಣ್ಣ ಗ್ರಾಮಕ್ಕೆ ತೆರಳಿ ಅಲ್ಲಿಯೇ ತಂಗಿದ್ದು, ಜನರ ಕಷ್ಟಗಳನ್ನು ಆಲಿಸಬೇಕು. ಜನರ ಬಗ್ಗೆ ಆಗಲೇ ನಾವು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜನರೊಂದಿಗೆ ಬೆರೆಯಿರಿ ಎಂದು ಪ್ರಧಾನಿ ಮೋದಿ ಅವರು ಮನವಿ ಮಾಡಿದರು.
18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇಲ್ಲ:ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, "ಕಾಂಗ್ರೆಸ್‌ನ ಭ್ರಷ್ಟತೆಯಿಂದಾಗಿಯೇ 70 ವರ್ಷಗಳ ಸ್ವಾತಂತ್ರ್ಯದ ನಂತರವೂ 18,000 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಮತ್ತು 'ಅಮೃತ ಕಾಲ'ದ ಉದ್ದೇಶಗಳನ್ನು ಅನುಷ್ಠಾನಕ್ಕೆ ತರಲು ದೇಶವು ಇಂದು ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ ಎಂದು ಹೇಳಿದರು.
ಈ ಅಮೃತ ಕಾಲದ 25 ವರ್ಷಗಳ ಪಯಣದಲ್ಲಿ ಕಳೆದೊಂದು ದಶಕದಲ್ಲಾದ ಬದಲಾವಣೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಭಾರತವು 2 ಮತ್ತು 3 ನೇ ಹಂತದ ನಗರಗಳ ಮೂಲಕ ಗೋಚರವಾಗುತ್ತದೆ. ಆಧುನೀಕಣವಾಗುತ್ತಿರುವ ಹಳ್ಳಿಗಳ ಮೂಲಕ ಅದು ಸಾಬೀತಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತಿತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಪ್ರವೇಶ: ಲೋಕಸಭೆ ಸದಸ್ಯತ್ವ ಅನರ್ಹತೆ ವಾಪಸ್