ಢಾಕಾ (ಬಾಂಗ್ಲಾದೇಶ): ಇಂದಿನಿಂದ ಮೂರು ದಿನಗಳ ಕಾಲ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ವಿಶೇಷ ವಿಮಾನದಲ್ಲಿ ಢಾಕಾ ತಲುಪಿದ್ದಾರೆ. ರಾಷ್ಟ್ರಪತಿ ಕೋವಿಂದ್ ಬರಮಾಡಿಕೊಳ್ಳಲು ಬಾಂಗ್ಲಾ ರಾಷ್ಟ್ರಪತಿ ಮೊಹಮ್ಮದ್ ಅಬ್ದುಲ್ ಹಮಿದ್ ಮತ್ತು ಪತ್ನಿ ರಶಿದಾ ಹಮಿದ್ ಆಗಮಿಸಿದ್ದರು.
ಮೂರು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡ ರಾಷ್ಟ್ರಪತಿ ಕೋವಿಂದ್.. ರಾಷ್ಟ್ರಪತಿ ಕೋವಿಂದ್ ಜೊತೆ ಪತ್ನಿ ಸವಿತಾ ಕೋವಿಂದ್ ಹಾಗೂ ಪುತ್ರಿ ಸ್ವಾತಿ ಕೋವಿಂದ್ ಸಹ ಢಾಕಾಗೆ ತೆರಳಿದ್ದಾರೆ. ಈ ಪ್ರವಾಸದ ವೇಳೆ ಕೋವಿಂದ್ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹಾಗೂ ವಿದೇಶಾಂಗ ಮಂತ್ರಿ ಡಾ.ಎ.ಕೆ ಅಬ್ದುಲ್ ಮೊಮೆನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ರಾಷ್ಟ್ರಪತಿ ಕುಟುಂಬಕ್ಕೆ ಢಾಕಾದಲ್ಲಿ ಅದ್ದೂರಿ ಸ್ವಾಗತ ದೊರಕಿದೆ. ಗಾರ್ಡ್ ಆಫ್ ಹಾನರ್ ಹಾಗೂ 21 ಗನ್ ಸಲ್ಯೂಟ್ ಗೌರವ ಸಹ ಸಂದಿದೆ. ಬಾಂಗ್ಲಾದೇಶ ವಿಮೋಚನೆಗೊಂಡು 50 ವರ್ಷ ಕಳೆದಿರುವ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪತಿ ಕೋವಿಂದ್ ಭೇಟಿ ನೀಡಿದ್ದಾರೆ. ವಿಶೇಷ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಢಾಕಾದಲ್ಲಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕಕ್ಕೂ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಜೊತೆಗೆ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮಡಿದ ಸೈನಿಕರ ಸ್ಮಾರಕಗಳಿಗೂ ಗೌರವ ಸಲ್ಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿ ಸಹ ಭೇಟಿ ನೀಡಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಬಿಪಿನ್ ರಾವತ್ ಸೋದರ ಮಾವನ ತುಂಡು ಭೂಮಿ ಸ್ವಾಧೀನ ಆರೋಪ