ರೂರ್ಕೆಲಾ (ಒಡಿಶಾ): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ರೂರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ)ಯ 18ನೇ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, "ತಾಂತ್ರಿಕ ಕ್ಷೇತ್ರದಲ್ಲಿನ ಮಹಿಳೆಯರ ಬೆಳವಣಿಗೆ ಮತ್ತು ಉತ್ಕೃಷ್ಟತೆಯು ನಮ್ಮ ರಾಷ್ಟ್ರೀಯ ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತದೆ". ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರದಲ್ಲಿ ಮಹಿಳೆಯರು ಉನ್ನತ ಶಿಕ್ಷಣವನ್ನು ಪಡೆಯಬೇಕಾಗಿದೆ ಎಂದಿದ್ದಾರೆ.
ಇತ್ತೀಚಿನ ಸಮೀಕ್ಷೆಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಮಹಿಳೆಯರ ದಾಖಲಾತಿ ಶೇಕಡಾ 20ರಷ್ಟಿದ್ದು, ನಮ್ಮ ಹೆಣ್ಣು ಮಕ್ಕಳಿಗೆ ತಾಂತ್ರಿಕ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸಬೇಕು ಮತ್ತು ಇತರ ಕ್ಷೇತ್ರಗಳಲ್ಲಿರುವಂತೆಯೇ ಅವರು ಉತ್ತಮ ಸಾಧನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಹೆಣ್ಣು ಮಕ್ಕಳು ಹುಡುಗರನ್ನು ಮೀರಿಸುತ್ತಿದ್ದು, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಚಿನ್ನದ ಪದಕಗಳನ್ನು ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಎನ್‌ಐಟಿ ರೂರ್ಕೆಲಾದಲ್ಲಿ ಏಳು ಚಿನ್ನದ ಪದಕ ಗೆದ್ದವರಲ್ಲಿ ಮೂವರು ಮಹಿಳೆಯರಾಗಿದ್ದು, ಇತರ ಕೇಂದ್ರ ವಿಶ್ವವಿದ್ಯಾಲಯಗಳಲ್ಲೂ ಇದೇ ಪರಿಸ್ಥಿತಿ ಇದೆ. ವಿಶ್ವವಿದ್ಯಾಲಯದಲ್ಲಿನ ಒಟ್ಟು 7,116 ವಿದ್ಯಾರ್ಥಿಗಳಲ್ಲಿ ಸುಮಾರು 1,518 ಮಂದಿ ಮಹಿಳೆಯರೇ ಇದ್ದಾರೆ ಎಂದರು.