ನವದೆಹಲಿ:ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸೇರಿದಂತೆ ಒಟ್ಟು 56 ಅಭ್ಯರ್ಥಿಗಳು ಸೋಮವಾರ ಸಂಜೆಯವರೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.
ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೊಂದಿರುವ ಕೆ.ಪದ್ಮರಾಜನ್ ಕೂಡಾ ನಾಮಪತ್ರ ಸಲ್ಲಿಸಿರುವುದು ಇಲ್ಲಿ ವಿಶೇಷ. ಇವರು ಇಲ್ಲಿಯವರೆಗೆ ಸ್ಪರ್ಧಿಸಿರುವ 231 ಚುನಾವಣೆಗಳಲ್ಲೂ ಸೋಲು ಕಂಡಿದ್ದಾರೆ.
ಜುಲೈ 18ರಂದು ನಡೆಯಲಿರುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರುವ 56 ಅಭ್ಯರ್ಥಿಗಳ ಪೈಕಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಯಾ ಶಂಕರ್ ಅಗರ್ವಾಲ್ ಕೂಡ ಒಬ್ಬರು.
ಇದನ್ನೂ ಓದಿ:ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್ 29 ಕಡೆಯ ದಿನ. 2017ರಲ್ಲಿ ಒಟ್ಟು 106 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸುವಾಗ 15,000 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಿದೆ.
ಎನ್‌ಡಿಎ ಮೈತ್ರಿಕೂಟದಿಂದ ದ್ರೌಪದಿ ಮುರ್ಮು ಜೂನ್ 24ರಂದು ಉಮೇದುವಾರಿಕೆ ಸಲ್ಲಿಸಿದ್ದು, ಪ್ರತಿಪಕ್ಷಗಳಿಂದ ಯಶವಂತ್ ಸಿನ್ಹಾ ಜೂನ್ 27ರಂದು ನಾಮಪತ್ರ ಸಲ್ಲಿಸಿದ್ದಾರೆ. ನೂತನ ರಾಷ್ಟ್ರಪತಿ ಆಯ್ಕೆಗೆ ಜುಲೈ 18ರಂದು ಚುನಾವಣೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರವಧಿ ಜುಲೈ 24ರಂದು ಕೊನೆಗೊಳ್ಳಲಿದೆ.