ನವದೆಹಲಿ:ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರತಿಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಯನ್ನಾಗಿ ಯಶವಂತ್ ಸಿನ್ಹಾ ಅವರನ್ನು ಅಂತಿಮಗೊಳಿಸಿವೆ. ಈ ನಡುವೆ, ಮೇಲ್ನೋಟಕ್ಕೆ ಆಡಳಿತಾರೂಢ ಬಿಜೆಪಿ ಕಾದುನೋಡುವ ತಂತ್ರಕ್ಕೆ ಶರಣಾದಂತೆ ಕಂಡು ಬರುತ್ತಿದ್ದರೂ, ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನೇ ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯೋಚಿಸುತ್ತಿದೆಯೇ?. ಎನ್ನುವ ಗುಮಾನಿ ಹಬ್ಬಿದೆ.
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವೆಂಕಯ್ಯ ನಾಯ್ದು ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ರಾಷ್ಟ್ರಪತಿ ಚುನಾವಣೆಯಂತಹ ನಿರ್ಣಾಯಕ ಸಮಯದಲ್ಲಿ ಪ್ರಮುಖ ನಾಯಕರು ಭೇಟಿ ಮಾಡಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನಾಯ್ಡು ಅವರನ್ನು ಕೇಸರಿ ಪಡೆ ಪರಿಗಣಿಸುತ್ತಿದೆಯೇ ಎಂಬ ಸಂಶಯ ಹುಟ್ಟು ಹಾಕಿದೆ.