ಕರ್ನಾಟಕ

karnataka

ETV Bharat / bharat

ದ್ರೌಪದಿ ಮುರ್ಮು VS ಯಶವಂತ್ ಸಿನ್ಹಾ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ - ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು

ದೇಶದ 16ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18 ರಂದು ಮತದಾನ ನಡೆದಿದ್ದು, ಗುರುವಾರ(ಜುಲೈ 21) ಮತ ಎಣಿಕೆ ನಡೆಯಲಿದೆ. ಈ ಮೂಲಕ ದೇಶದ ಪ್ರಥಮ ಪ್ರಜೆ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಗಲಿದೆ.

Presidential Election result
Presidential Election result

By

Published : Jul 20, 2022, 10:42 PM IST

ನವದೆಹಲಿ:ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ಈಗಾಗಲೇ ಚುನಾವಣೆ ನಡೆದಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಮತ ಎಣಿಗೆ ಆರಂಭಗೊಳ್ಳಲಿದೆ. ಈ ಮೂಲಕ ದೇಶದ 16ನೇ ರಾಷ್ಟ್ರಪತಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಎನ್​​ಡಿಎ ಬೆಂಬಲಿತ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣದಲ್ಲಿದ್ದು, ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್​ ಸಿನ್ಹಾ ಸ್ಪರ್ಧೆ ಮಾಡಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ನೂತನ ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನವಾಗಿದ್ದು,ಒಟ್ಟು 736 ಸಂಸತ್​ ಸದಸ್ಯರ ಪೈಕಿ 727 ಸದಸ್ಯರು ಹಾಗೂ 9 ಶಾಸಕಾಂಗ ಅಸೆಂಬ್ಲಿ ಸದಸ್ಯರಿಗೆ ಮತದಾನ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿತ್ತು.

ಇದರಲ್ಲಿ ಒಟ್ಟು 728 ಸದಸ್ಯರು ವೋಟ್ ಮಾಡಿದ್ದಾರೆ. ಇದರ ಜೊತೆಗೆ ದೇಶದ 4,033 ಶಾಸಕರಿಗೆ ಗುಪ್ತ ಮತ ಹಾಕುವ ಹಕ್ಕು ನೀಡಲಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯ 122, ಕಾಂಗ್ರೆಸ್​ನ 70 ಹಾಗೂ ಜೆಡಿಎಸ್​​ನ 32 ಶಾಸಕರು ಮತ ಚಲಾವಣೆ ಮಾಡಿದ್ದಾರೆ. ಈ ಮೂಲಕ ಶೇ. 98.91ರಷ್ಟು ಮತದಾನವಾಗಿದೆ.

ದ್ರೌಪದಿ ಮುರ್ಮು ಆಯ್ಕೆ ಬಹುತೇಕ ಖಚಿತ:ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಪರ 44 ಪಕ್ಷಗಳಿದ್ರೆ, ಸಿನ್ಹಾ ಜೊತೆ 34 ಪಕ್ಷಗಳು ನಿಂತಿವೆ. ಎನ್‍ಡಿಎ ಕೂಟದಲ್ಲಿಲ್ಲದ ಬಿಜೆಡಿ, ವೈಎಸ್‍ಆರ್ ಕಾಂಗ್ರೆಸ್, ಶಿವಸೇನೆ, ಜೆಎಂಎಂ, ಟಿಡಿಪಿ, ಬಿಎಸ್‍ಪಿಯಂತಹ ಪಕ್ಷಗಳು ಕೂಡ ಮುರ್ಮುಗೆ ಬೆಂಬಲ ಪ್ರಕಟಿಸಿವೆ.

ಹೀಗಾಗಿ, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆ ರಾಷ್ಟ್ರಪತಿ ಆಗುವುದು ಖಚಿತವಾಗಿದೆ. ಮುರ್ಮು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಅಧಿಕೃತವಾಗಿ ತಿಳಿಸುವುದೊಂದು ಬಾಕಿ ಇದೆ.

ಬುಡಕಟ್ಟು ಜನಾಂಗದ ನಾಯಕಯಾಗಿರುವ ದ್ರೌಪದಿ ಮುರ್ಮು ಈಗಾಗಲೇ ಜಾರ್ಖಂಡ್​ನಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಯಶವಂತ್​ ಸಿನ್ಹಾ ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಹಣಕಾಸು ಸಚಿವರಾಗಿ ಅನುಭವ ಹೊಂದಿದ್ದಾರೆ. ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿರುವ ಕಾರಣ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ದ್ರೌಪದಿ ಮುರ್ಮು ಅವರು ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಬಿರಂಚಿ ನಾರಾಯಣ ಟುಡು. ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದರಾದ ದ್ರೌಪದಿ, ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು.

1997 ರಲ್ಲಿ ರಾಯರಂಗಪುರ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದ ನಂತರ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೇ ವರ್ಷ ಅವರು ರಾಯರಂಗಪುರ ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಲಾ ಶಿಕ್ಷಕರಾಗಿ ಮತ್ತು ನಾಲ್ಕು ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ 1983 ರವರೆಗೆ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

2000 ಮತ್ತು 2004 ರಲ್ಲಿ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. BJD-BJP ಮೈತ್ರಿ ಸಮಯದಲ್ಲಿ ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ರಾಜ್ಯ ಸಚಿವರಾಗಿ ಮತ್ತು ಆಗಸ್ಟ್ 6, 2002 ರಿಂದ ಮೇ 16, 2004 ರವರೆಗೆ ಮೀನುಗಾರಿಕೆ ಇಲಾಖೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಕೆಲಸ ಮಾಡಿದ ಅನುಭವವಿದೆ.

ಇದನ್ನೂ ಓದಿರಿ:ದ್ರೌಪದಿ ಮುರ್ಮು ವಿಜಯೋತ್ಸವ 1 ಲಕ್ಷಕ್ಕೂ ಹೆಚ್ಚು ಬುಡಕಟ್ಟು ಹಳ್ಳಿಗಳಲ್ಲಿ ಆಚರಿಸಲು ಬಿಜೆಪಿ ಪ್ಲಾನ್​!

ವಿಜಯೋತ್ಸವಕ್ಕೆ ಬಿಜೆಪಿ ಭರ್ಜರಿ ಪ್ಲಾನ್​:ನೂತನ ರಾಷ್ಟ್ರಪತಿ ಆಗಿ ದ್ರೌಪದಿ ಮುರ್ಮು ಆಯ್ಕೆ ಬಹುತೇಕ ಖಚಿತವಾಗಿದೆ. ಹೀಗಾಗಿ, ಈ ವಿಜಯೋತ್ಸವ ಆಚರಣೆ ಮಾಡಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಒಂದು ಲಕ್ಷಕ್ಕೂ ಅಧಿಕ ಬುಡಕಟ್ಟು ಗ್ರಾಮಗಳಲ್ಲಿ ದ್ರೌಪದಿ ಮುರ್ಮು ವಿಜಯೋತ್ಸವ ಆಚರಣೆ ಮಾಡಲು ಬಿಜೆಪಿ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಬಹಿರಂಗಗೊಂಡ ಬಳಿಕ ಈ ಸಂಭ್ರಮಾಚರಣೆ ಮಾಡಲು ನಿರ್ದೇಶನ ನೀಡಲಾಗಿದೆ.

ABOUT THE AUTHOR

...view details