ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ದೀಪಾವಳಿಯ ಮುನ್ನಾದಿನವಾದ ಇಂದು ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ಸಂದೇಶದಲ್ಲಿ ರಾಷ್ಟ್ರಪತಿಗಳು, ದೀಪಾವಳಿಯ ಶುಭ ಸಂದರ್ಭದಲ್ಲಿ, ಭಾರತ ಹಾಗೂ ವಿದೇಶಗಳಲ್ಲಿ ವಾಸಿಸುವ ನಮ್ಮ ಎಲ್ಲಾ ನಾಗರಿಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಒಳ್ಳೆಯದು ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವಾಗಿದೆ. ಈ ಹಬ್ಬವನ್ನು ನಮ್ಮ ಸಮಾಜದ ವಿವಿಧ ಭಾಗಗಳಲ್ಲಿ ವಿಭಿನ್ನ ನಂಬಿಕೆಗಳನ್ನು ಅನುಸರಿಸುವ ಜನರು ಹೆಚ್ಚಾಗಿ ಆಚರಿಸುತ್ತಾರೆ. ದೀಪಾವಳಿಯ ಶುಭ ಸಂದರ್ಭವು ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ವಾಸ್ತವವಾಗಿ, ಇದು ನಮ್ಮ ಸಮೃದ್ಧಿ ಮತ್ತು ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವ ಸಂದರ್ಭವಾಗಿದೆ. ನಾವು ಈ ಹಬ್ಬವನ್ನು ಸ್ವಚ್ಛ ಮತ್ತು ಸುರಕ್ಷಿತ ರೀತಿಯಲ್ಲಿ ಒಟ್ಟಾಗಿ ಆಚರಿಸೋಣ ಮತ್ತು ಪರಿಸರ ಸಂರಕ್ಷಣೆಯಲ್ಲಿ ಕೊಡುಗೆ ನೀಡಲು ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರೂ ಕೂಡ ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಬೆಳಕಿನ ಹಬ್ಬವಾದ ದೀಪಾವಳಿಯ ಶುಭ ಸಂದರ್ಭದಲ್ಲಿ ನಮ್ಮ ದೇಶದ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.