ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವ ಮುನ್ನಾ ದಿನವಾದ ಇಂದು ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದರು. ಈ ವೇಳೆ ಎಲ್ಲ ಭಾರತೀಯರಿಗೂ ಸ್ವತಂತ್ರ ದಿನದ ಶುಭಾಶಯ ತಿಳಿಸಿದ ಅವರು, ಈ ದಿನ ನಮ್ಮೆಲ್ಲರಿಗೂ ಸಂತೋಷದ ದಿನವಾಗಿದೆ ಎಂದರು.
ಈ ವರ್ಷದ ಸ್ವಾತಂತ್ರ್ಯೋತ್ಸವ ನಮಗೆ ಅತ್ಯಂತ ವಿಶೇಷತೆಯಿಂದ ಕೂಡಿದೆ. ಕಾರಣ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಾವೆಲ್ಲರೂ ಅಮೃತ್ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ನಮಗೆ ಸ್ವಾತಂತ್ರ್ಯದ ಹಬ್ಬ. ಅನೇಕ ತಲೆಮಾರು, ಅಜ್ಞಾತ ಹೋರಾಟಗಾರರ ಪ್ರತಿಫಲ. ಸ್ವಾತಂತ್ರ ಪಡೆದುಕೊಳ್ಳಲು ಅನೇಕರು ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಆ ವೀರ ಹುತಾತ್ಮರ ಬಲಿದಾನಕ್ಕಾಗಿ ನಾನು ತಲೆಬಾಗುತ್ತೇನೆ ಎಂದರು.
ಒಲಿಂಪಿಕ್ಸ್ ಕ್ರೀಡಾಪಟುಗಳ ಗುಣಗಾಣ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿ ಭಾರತಕ್ಕೆ ಹೆಚ್ಚಿನ ಪದಕ ತಂದುಕೊಟ್ಟಿರುವ ಅಥ್ಲೀಟ್ಸ್ಗಳ ಸಾಧನೆ ಬಗ್ಗೆ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 121 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಈ ಸಲ ಅತಿ ಹೆಚ್ಚು ಪದಕ ಗೆದ್ದಿದೆ ಎಂದರು. ಇದೇ ವೇಳೆ ನಮ್ಮ ದೇಶದ ಹೆಣ್ಣು ಮಕ್ಕಳು ಕ್ರೀಡೆ ಸೇರಿದಂತೆ ವಿವಿಧ ವಲಯಗಳಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿರುವುದ ಹೆಮ್ಮೆಗೆ ಸಂಗತಿ ತಿಳಿಸಿದರು.
ಕೋವಿಡ್ 2ನೇ ಅಲೆ ವೇಳೆ ಅತಿ ಹೆಚ್ಚು ಸಾವು-ನೋವು
ದೇಶಾದ್ಯಂತ ತೀವ್ರ ಆಘಾತ ಮೂಡಿಸಿದ್ದ ಎರಡನೇ ಕೋವಿಡ್ ಅಲೆ ಅತಿ ಹೆಚ್ಚು ಜನರ ಪ್ರಾಣ ಬಲಿ ಪಡೆದುಕೊಂಡಿದ್ದು, ಇದು ತೀವ್ರ ನೋವು ತಂದಿದೆ ಎಂದ ರಾಷ್ಟ್ರಪತಿಗಳು, ಕಳೆದ ವರ್ಷದಂತೆ ಈ ವರ್ಷವೂ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದರು.
ಕೋವಿಡ್ನಿಂದ ಪ್ರಾಣ ಕಳೆದುಕೊಂಡಿರುವ ಕುಟಂಬದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿರುವ ರಾಷ್ಟ್ರಪತಿ, ಕೊರೊನಾ ಇನ್ನು ಮುಗಿದಿಲ್ಲ. ಮುಂಚೂಣಿ ಕಾರ್ಯಕರ್ತರ ಅಭೂತ ಪೂರ್ವ ಕೆಲಸದಿಂದ ಇದರ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಿದ್ದೇವೆ. ಆದರೆ ಅನೇಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸುವಂತಾಯಿತು ಎಂದು ತಿಳಿಸಿದರು.
ಇದನ್ನೂ ಓದಿರಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ: ರಾಷ್ಟ್ರಪತಿ ಗುಣಗಾನ
ದೇಶದಲ್ಲಿ ಇಲ್ಲಿಯವರೆಗೆ 50 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದ್ದು, ಅಭೂತಪೂರ್ವ ಸಾಧನೆಯಾಗಿದೆ. ಎಲ್ಲರೂ ವ್ಯಾಕ್ಸಿನ್ ಪಡೆದುಕೊಂಡು, ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಮನವಿ ಮಾಡಿದರು.
ಎರಡನೇ ಕೋವಿಡ್ ಅಲೆ ಮುಗಿದಿಲ್ಲ ಎಂದು ಎಚ್ಚರಿಕೆ ನೀಡಿದ ರಾಷ್ಟ್ರಪತಿ
ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಮುಕ್ತಾಯಗೊಂಡಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದರ ವಿರುದ್ಧ ಹೋರಾಟಬೇಕಿದೆ ಎಂದ ರಾಷ್ಟ್ರಪತಿಗಳು, ಎಲ್ಲರೂ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು, ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದರು. ಜೊತೆಗೆ ದೇಶದ ಪ್ರತಿಯೊಬ್ಬರು ಕೋವಿಡ್ ಹೋರಾಟದಲ್ಲಿ ಭಾಗಿಯಾಗುವಂತೆ ತಿಳಿಸಿದರು.