ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ನಮನ ಸಲ್ಲಿಸಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇನ್ನು ಮುಂದೆ ‘ಪರಾಕ್ರಮ ದಿನ’ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರವು ನೇತಾಜಿ ಸುಭಾಸ್ ಚಂದ್ರ ಬೋಸ್‌ರ ಜನ್ಮದಿನವನ್ನು ಆಚರಿಸುತ್ತ ಅವರಿಗೆ ಗೌರವ ಸಲ್ಲಿಸುತ್ತಿದೆ. ಅವರ ಧೈರ್ಯ ಮತ್ತು ಶೌರ್ಯವನ್ನು ಗೌರವಿಸಲು ಈ ದಿನವನ್ನು 'ಪರಾಕ್ರಮ ದಿನ' ಎಂದು ಆಚರಿಸುವುದು ಸೂಕ್ತವಾಗಿದೆ. ನೇತಾಜಿ ಅವರು ಅಸಂಖ್ಯಾತ ಅನುಯಾಯಿಗಳಲ್ಲಿ ರಾಷ್ಟ್ರೀಯತೆಯ ಉತ್ಸಾಹವನ್ನು ಹುಟ್ಟುಹಾಕಿದರು" ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ "ನೇತಾಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಸಾಧಾರಣ ಕೊಡುಗೆ ನೀಡಿದ ನಮ್ಮ ಪ್ರೀತಿಯ ರಾಷ್ಟ್ರೀಯ ವೀರರಲ್ಲಿ ಒಬ್ಬರು. ಅವರ ದೇಶಭಕ್ತಿ ಮತ್ತು ತ್ಯಾಗ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ. ಸ್ವಾತಂತ್ರ್ಯದ ಮನೋಭಾವವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ" ಎಂದು ಕೋವಿಂದ್ ತಿಳಿಸಿದ್ದಾರೆ.
"ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತಾಂಬೆಯ ಹೆಮ್ಮೆಯ ಪುತ್ರ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಸಮರ್ಪಣೆಯನ್ನು ಭಾರತವು ಎಂದಿಗೂ ನೆನಪಿಸಿಕೊಳ್ಳುತ್ತದೆ" ಎಂದು ಪಿಎಂ ಮೋದಿ ಹಳೆಯ ಫೋಟೋವೊಂದನ್ನು ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸೋಂನ ಗುವಾಹಟಿಯಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದ್ದಾರೆ.