ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ - 20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ' ಎಂಬ ಮುದ್ರಣವು ವಿವಾದಕ್ಕೆ ಕಾರಣವಾಗಿದೆ. ಇದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಕೆಲ ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚಿಸಿವೆ. ಇಂಡಿಯಾ ಒಕ್ಕೂಟದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ, ಭಾರತಕ್ಕೂ ಮರು ನಾಮಕರಣ ಮಾಡುತ್ತಾರೆಯೇ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, 'ಪ್ರೆಸಿಡೆಂಟ್ ಆಫ್ ಭಾರತ್' ಹೆಸರಲ್ಲಿ ಜಿ-20 ಔತಣಕೂಟದ ಆಹ್ವಾನ ಪತ್ರಿಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ನಾನು ಇಂತಹ ವದಂತಿಯನ್ನು ಕೇಳಿದ್ದೆ. ಇದು ಏಕೆ ನಡೆಯುತ್ತಿದೆ?, ಕೆಲ ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚನೆ ಮಾಡಿದೆ. ಮುಂದೆ ಇಂಡಿಯಾ ಒಕ್ಕೂಟವು ಭಾರತ ಎಂದು ತಮ್ಮ ಒಕ್ಕೂಟದ ಹೆಸರನ್ನು ಬದಲಾಯಿಸಿದರೆ, ಅವರು (ಕೇಂದ್ರ ಸರ್ಕಾರ) ಭಾರತಕ್ಕೆ ಎಂದು ಮರುನಾಮಕರಣ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೇ, ಇದೊಂದು ದೇಶದ್ರೋಹ ಎಂದು ಟೀಕಿಸಿದರು.
ಇಂಡಿಯಾ ಒಕ್ಕೂಟದಲ್ಲಿ ಆಮ್ ಆದ್ಮಿ ಪಕ್ಷ ಸಹ ಸೇರಿದೆ. ಕೇಂದ್ರದ ನಡೆ ಬಲವಾಗಿ ಖಂಡಿಸಿದ ಕೇಜ್ರಿವಾಲ್, ಪ್ರತಿಪಕ್ಷಗಳ ಮೈತ್ರಿಕೂಟದಿಂದ ಬಿಜೆಪಿ ಎಷ್ಟು ವಿಚಲಿತವಾಗಿದೆಯೆಂದರೆ ಅದನ್ನು ಇದಕ್ಕೂ ಮುನ್ನ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾಪದೊಂದಿಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿತು ಎಂದೂ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯಾ ಎಂದರೆ ಭಾರತವೇ, ಹಠಾತ್ತನೆ ಏನಾಯಿತು? - ಮಮತಾ:ತೃಣಮೂಲ ಕಾಂಗ್ರೆಸ್ ನಾಯಕ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇಂಡಿಯಾ ಎಂದರೆ ಭಾರತವೇ. ಈಗ ನಮ್ಮ ದೇಶವನ್ನು ಭಾರತ ಎಂದು ಮಾತ್ರ ಕರೆಯಬೇಕು ಎನ್ನಲು ಹಠಾತ್ ಏನಾಯಿತು ಎಂದು ಪ್ರಶ್ನಿಸಿದ್ದಾರೆ.