ನವದೆಹಲಿ:ಈ ಸಲದ ಗಣರಾಜ್ಯೋತ್ಸವದ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ಸಿಸಿ ಅವರು ಭಾರತಕ್ಕೆ ವಿಮಾನದಲ್ಲಿ ಬಂದಿಳಿದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ಇದೇ ವೇಳೆ, ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನ ನೀಡಲಾಯಿತು. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಇದೇ ಮೊದಲಾಗಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಕೂಡ ಮೊದಲ ಬಾರಿಗೆ ದೇಶಕ್ಕೆ ಭೇಟಿ ನೀಡಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಕಾರಣ ಅವರ ಭಾರತ ಭೇಟಿಯನ್ನು 'ಐತಿಹಾಸಿಕ' ಎಂದು ಬಣ್ಣಿಸಲಾಗಿದೆ.
ಅಬ್ದೆಲ್ ಫತ್ತಾಹ್ ಅವರ ಸ್ವಾಗತ ವೇಳೆ ವಿದೇಶಾಂಗ ಸಚಿವ ಎಸ್ ಜೈಶಂಕರ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸೇರಿದಂತೆ ಹಲವಾರು ಕೇಂದ್ರ ಸಚಿವರು, ಅಧಿಕಾರಿಗಳು ಇದ್ದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರು ಮೊದಲಿಗೆ ರಾಜ್‌ಘಾಟ್‌ನಲ್ಲಿನ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿದರು. ಬಳಿಕ ರಾಜಭವನಕ್ಕೆ ಬಂದ ಈಜಿಪ್ಟ್ ಅಧ್ಯಕ್ಷರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಕೆಲಹೊತ್ತು ರಾಷ್ಟ್ರಪತಿಗಳೊಂದಿಗೆ ಮಾತುಕತೆ ನಡೆಸಿದರು.