ಕರ್ನಾಟಕ

karnataka

ETV Bharat / bharat

Independence Day: ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶ, ಹಕ್ಕು, ಕರ್ತವ್ಯಗಳಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು - President Droupadi Murmu

President Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು.

7th Independence Day
ರಾಷ್ಟ್ರಪತಿ ದ್ರೌಪದಿ ಮುರ್ಮು

By

Published : Aug 14, 2023, 9:41 PM IST

Updated : Aug 14, 2023, 10:27 PM IST

ನವದೆಹಲಿ:''ಪ್ರತಿಯೊಬ್ಬ ಭಾರತೀಯನಿಗೂ ಜಾತಿ, ಪಂಥ, ಭಾಷೆಯಂತಹ ಹಲವು ಅಸ್ಮಿತೆಗಳಿವೆ. ಆದರೆ, ಭಾರತೀಯ ಪ್ರಜೆ ಎಂಬ ಅಸ್ಮಿತೆ ಎಲ್ಲಕ್ಕಿಂತ ಮಿಗಿಲು. ಪ್ರತಿಯೊಬ್ಬನಿಗೂ ಈ ನೆಲದಲ್ಲಿ ಸಮಾನ ಅವಕಾಶ, ಹಕ್ಕು ಮತ್ತು ಕರ್ತವ್ಯಗಳಿವೆ'' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ತಮ್ಮ ಪ್ರಾಣ ತ್ಯಾಗ ಮಾಡಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾದ ಮಾತಂಗಿನಿ ಹಜ್ರಾ, ಕನಕಲತಾ ಬರುವಾ ಅವರಿಗೆ ರಾಷ್ಟ್ರಪತಿ ಗೌರವ ಸಲ್ಲಿಸಿದರು. ಗಾಂಧೀಜಿ ಮತ್ತು ಇತರ ಮಹಾನ್ ವೀರರು ಭಾರತದ ಆತ್ಮವನ್ನು ಪುನರುಜ್ಜೀವನಗೊಳಿಸಿದರು. ನಮ್ಮ ಶ್ರೇಷ್ಠ ನಾಗರಿಕತೆಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿದರು. ನಂತರದ ಎಲ್ಲ ಪೀಳಿಗೆಯ ಮಹಿಳೆಯರಿಗೆ ಆತ್ಮಸ್ಥೈರ್ಯದಿಂದ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಅವರು ಸ್ಪೂರ್ತಿದಾಯಕ ಆದರ್ಶಗಳನ್ನು ನೀಡಿದ್ದಾರೆ ಎಂದರು.

''ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕೊಡುಗೆ ನೀಡುತ್ತಿದ್ದಾರೆ. ರಾಷ್ಟ್ರದ ಹಿರಿಮೆ ಹೆಚ್ಚಿಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವಂತೆ ನಾನು ಎಲ್ಲ ದೇಶವಾಸಿಗಳಿಗೂ ಮನವಿ ಮಾಡುತ್ತೇನೆ. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಎಲ್ಲ ರೀತಿಯ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಮುನ್ನಡೆಯಬೇಕೆಂದು ನಾನು ಬಯಸುತ್ತೇನೆ'' ಎಂದು ನುಡಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ:"ಭಾರತವು ಪ್ರಪಂಚದಾದ್ಯಂತ ಅಭಿವೃದ್ಧಿ ಗುರಿಗಳು ಮತ್ತು ಮಾನವೀಯ ಸಹಕಾರವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ. ಪ್ರಾಚೀನ ಕಾಲದಿಂದಲೂ ನಾವು ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹೊಂದಿದ್ದೇವೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. 1950ರಲ್ಲಿ ದೇಶದ ಹೊಸ ಉದಯವಾಯಿತು'' ಎಂದು ತಿಳಿಸಿದರು.

ರಾಷ್ಟ್ರಪತಿ ಭಾಷಣದ ಇತರೆ ಅಂಶಗಳು:

  • ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಆತಂಕಕ್ಕೆ ಕಾರಣವಾಗಿದೆ. ಆದರೆ, ಭಾರತ ಸರ್ಕಾರ, ಆರ್‌ಬಿಐ ಇದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಹಣದುಬ್ಬರದಿಂದ ಸಾಮಾನ್ಯ ಜನರನ್ನು ರಕ್ಷಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಬಡವರಿಗೆ ವ್ಯಾಪಕವಾದ ಭದ್ರತೆ ಒದಗಿಸುತ್ತದೆ. ಜಾಗತಿಕ ಆರ್ಥಿಕ ಬೆಳವಣಿಗೆಗಾಗಿ ಜಗತ್ತು ಭಾರತದತ್ತ ಎದುರು ನೋಡುತ್ತಿದೆ.
  • G-20 ಅಧ್ಯಕ್ಷತೆವಹಿಸುವ ಭಾರತವು ವ್ಯಾಪಾರ ಮತ್ತು ಹಣಕಾಸಿನ ನಿರ್ಧಾರದಲ್ಲಿ ಸಮಾನ ಪ್ರಗತಿಯತ್ತ ಸಾಗುತ್ತಿದೆ. ವ್ಯಾಪಾರ ಮತ್ತು ಹಣಕಾಸುಗಳ ಹೊರತಾಗಿ, ಮಾನವ ಅಭಿವೃದ್ಧಿಯ ವಿಷಯಗಳಲ್ಲಿ ಮಹತ್ವ ಪಾತ್ರವಹಿಸಿದೆ. ಜಾಗತಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಭಾರತವು ನಾಯಕತ್ವ ಸಾಬೀತುಪಡಿಸಿದೆ. ಸದಸ್ಯ ರಾಷ್ಟ್ರಗಳು ಈ ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ ಕ್ರಮವನ್ನು ಮುಂದುವರಿಯಲಿದೆ ಎಂಬ ವಿಶ್ವಾಸ ನನಗಿದೆ.
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ಆವಿಷ್ಕಾರಗಳು ಹೊಸ ಎತ್ತರಕ್ಕೆ ತಲುಪಲು ಸಹಕಾರಿಯಾಗಿದೆ. ಈ ವರ್ಷ ಇಸ್ರೋ ಚಂದ್ರಯಾನ-3 ಅನ್ನು ಉಡಾವಣೆ ಮಾಡಿದ್ದು, 'ವಿಕ್ರಮ್' ಹೆಸರಿನ ಲ್ಯಾಂಡರ್ ಮತ್ತು 'ಪ್ರಜ್ಞಾನ್' ಹೆಸರಿನ ಅದರ ರೋವರ್ ಮುಂದಿನ ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಲಿದೆ. ನಾನು ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ. ಚಂದ್ರನ ಮಿಷನ್ ನಮ್ಮ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಒಂದು ಮೆಟ್ಟಿಲಾಗದ್ದು, ನಾವು ಇನ್ನೂ ತುಂಬಾ ಮುಂದೆ ಹೋಗಬೇಕಿದೆ.
  • ಹವಾಮಾನ ವೈಪರೀತ್ಯಗಳು ಎಲ್ಲರ ಮೇಲೆ ಪರಿಣಾಮ ಬೀರುತ್ತವೆ. ಪ್ರಭಾವಕ್ಕೆ ಒಳಗಾಗಿರುವ ನಗರಗಳು ಮತ್ತು ಗುಡ್ಡಗಾಡು ಪ್ರದೇಶಗಳನ್ನು ವಿಶೇಷವಾಗಿ ಹೆಚ್ಚು ಚೇತರಿಸಿಕೊಳ್ಳುವ ಅಗತ್ಯವಿದೆ. ದುರಾಶೆಯ ಸಂಸ್ಕೃತಿಯು ಪ್ರಪಂಚವನ್ನು ಪ್ರಕೃತಿಯಿಂದ ದೂರ ಮಾಡುತ್ತಿದೆ. ಆದ್ರೆ ಅನೇಕ ಬುಡಕಟ್ಟು ಸಮುದಾಯಗಳು ನಿಸರ್ಗಕ್ಕೆ ಹತ್ತಿರವಾಗಿ ಮತ್ತು ಅದರೊಂದಿಗೆ ಸಾಮರಸ್ಯದಿಂದ ಬದುಕುತ್ತಿವೆ. ಅವರ ಮೌಲ್ಯಗಳು ಮತ್ತು ಜೀವನಶೈಲಿಯು ಹವಾಮಾನ ಕ್ರಿಯೆಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತವೆ.
  • ನಮ್ಮ ದೇಶವು ಹೊಸ ಸಂಕಲ್ಪಗಳೊಂದಿಗೆ 'ಅಮೃತ ಕಾಲ'ವನ್ನು ಪ್ರವೇಶಿಸಿದೆ. ನಾವು 2047ರ ವೇಳೆಗೆ ಭಾರತವನ್ನು ಅಂತರ್ಗತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಮುನ್ನಡೆಯುತ್ತಿದ್ದೇವೆ. ವೈಯಕ್ತಿಕ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠತೆಯತ್ತ ಶ್ರಮಿಸಲು ನಮ್ಮ ಮೂಲಭೂತ ಕರ್ತವ್ಯವನ್ನು ನಿರ್ವಹಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ.
  • ಶಿಕ್ಷಣವು ಸಾಮಾಜಿಕ ಸಬಲೀಕರಣದ ಬಹುದೊಡ್ಡ ಸಾಧನವಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಬದಲಾವಣೆಯನ್ನು ಪ್ರಾರಂಭಿಸಿದೆ. ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗಿನ ನನ್ನ ಸಂವಾದದಿಂದ, ಕಲಿಕೆಯ ಪ್ರಕ್ರಿಯೆಯು ಹೆಚ್ಚು ಮೃದುವಾಗಿದೆ.
  • ನಮ್ಮ ಸಂವಿಧಾನವು ನಮ್ಮ ಮಾರ್ಗದರ್ಶಿ ದಾಖಲೆಯಾಗಿದೆ. ಸಂವಿಧಾನ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ನಮ್ಮ ರಾಷ್ಟ್ರ ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡೆಯೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ತಿಳಿಸಿದರು.

ಇದನ್ನೂ ಓದಿ:ISRO: ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಿದ್ಧತೆ; ಸೆಪ್ಟೆಂಬರ್​ನಲ್ಲಿ 'ಆದಿತ್ಯ ಎಲ್​-1' ಉಪಗ್ರಹ ಉಡ್ಡಯನ?

Last Updated : Aug 14, 2023, 10:27 PM IST

ABOUT THE AUTHOR

...view details