ನವದೆಹಲಿ:ಇಂದಿನ ಯುವ ಪೀಳಿಗೆ ತಾವು ಹುಟ್ಟಿ ಬೆಳೆದ ಹಳ್ಳಿ ಅಥವಾ ಪಟ್ಟಣ, ತಾವು ಅಕ್ಷರ ಕಲಿತ ಶಾಲೆ, ಜೀವನಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಜೊತೆ ಸದಾ ಸಂಪರ್ಕದಲ್ಲಿರುವ ಸಂಪ್ರದಾಯವನ್ನು ಮುಂದುವರಿಸಬೇಕು. ನಮ್ಮ ಬದುಕಿನ ಅಡಿಪಾಯ ಗಟ್ಟಿಯಾಗಿರಿಸಿರುವ ಮೂಲ ಬೇರಿನ ಜೊತೆಗಿನ ಸಂಪರ್ಕವೇ ಭಾರತದ ಸಾರ ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರ ತ್ಯಜಿಸುವ ಮುನ್ನಾದಿನ ಭಾನುವಾರ ಯುವಜನಾಂಗಕ್ಕೆ ಕಿವಿಮಾತು ಹೇಳಿದ್ದಾರೆ.
ರಾಷ್ಟ್ರಪತಿ ಕೋವಿಂದ್ ತಮ್ಮ ವಿದಾಯ ಭಾಷಣದಲ್ಲಿ, ನನ್ನ ಅಧಿಕಾರವಧಿಯಲ್ಲಿ ನನ್ನ ಮನೆಗೆ ಭೇಟಿ ನೀಡಿದ್ದು ಮತ್ತು ಕಾನ್ಪುರದಲ್ಲಿರುವ ನನ್ನ ಶಿಕ್ಷಕರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದು. ಹಾಗಾಗಿ ನಿಮ್ಮ ಜೀವನಕ್ಕೆ ಬುನಾದಿ ಹಾಕಿದ ನಿಮ್ಮ ಊರು, ಶಾಲೆ, ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಯಾವತ್ತೂ ಹಚ್ಚಹಸಿರಾಗಿ ಇಟ್ಟುಕೊಳ್ಳಿ ಎಂದರು.
ಐದು ವರ್ಷಗಳ ಹಿಂದೆ, ನೀವು ನನ್ನ ಮೇಲೆ ಅಪಾರ ನಂಬಿಕೆಯನ್ನಿರಿಸಿ ನನ್ನನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದೀರಿ. ನನ್ನ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನನ್ನ ಹುದ್ದೆಯನ್ನು ತ್ಯಜಿಸುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಭೇಟಿ ನೀಡಿದ ಸಂದರ್ಭ ನಾಗರಿಕರೊಂದಿಗೆ ನಡೆಸಿದ ಮಾತುಕತೆಗಳಿಂದ ನಾನು ಬಹಳಷ್ಟು ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆದಿದ್ದೇನೆ.
ಅದರಲ್ಲೂ ಸಶಸ್ತ್ರ ಪಡೆಗಳು, ಅರೆ ಮಿಲಿಟರಿ ಪಡೆಗಳು ಮತ್ತು ಪೊಲೀಸರನ್ನು ಭೇಟಿಯಾಗಲು ಸಿಕ್ಕ ಅವಕಾಶಗಳು ನನ್ನ ಪಾಲಿಗೆ ಮಹತ್ವದ್ದು, ಅವುಗಳನ್ನು ನಾನು ಸದಾ ಗೌರವಿಸುತ್ತೇನೆ. ವಿದೇಶ ಪ್ರವಾಸಗಳನ್ನು ಕೈಗೊಂಡಾಗ ಅಲ್ಲಿನ ಭಾರತೀಯರಲ್ಲಿ ಕಂಡ ತಾಯ್ನಾಡಿನ ಮೇಲಿನ ಪ್ರೀತಿ, ಕಾಳಜಿಗೆ ನಾನು ಮೂಕವಿಸ್ಮಿತನಾಗಿದ್ದೆ ಎಂದು ರಾಷ್ಟ್ರಪತಿ ಕೋವಿಂದ್ ತಮ್ಮ ವಿದೇಶಿ ಪ್ರವಾಸದ ಅನುಭವಗಳನ್ನೂ ಹಂಚಿಕೊಂಡರು.