ಕರ್ನಾಟಕ

karnataka

ETV Bharat / bharat

ಮಹಾ ಮಾನವತಾವಾದಿ ಅಂಬೇಡ್ಕರ್​ 65ನೇ ಪರಿನಿರ್ವಾಣ ದಿನ: ಗಣ್ಯರಿಂದ ಗೌರವ ಸಮರ್ಪಣೆ - ಸಂವಿಧಾನಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ನಿಧನ ದಿನ

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿಧನ ಹೊಂದಿದ ದಿನವಾದ ಡಿಸೆಂಬರ್‌ 6ನ್ನು ಮಹಾಪರಿನಿರ್ವಾಣ ಅಥವಾ ಪರಿನಿಬ್ಬಾಣ ದಿವಸವೆಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಗಣ್ಯರು ಇಂದು ಗೌರವ ಸಮರ್ಪಿಸಿದ್ದಾರೆ.

President Kovind, PM Modi pay tribute to BR Ambedkar on his death anniversary
ಗಣ್ಯರಿಂದ ಗೌರವ ಸಮರ್ಪಣೆ

By

Published : Dec 6, 2021, 10:01 AM IST

Updated : Dec 6, 2021, 10:42 AM IST

ಹೈದರಾಬಾದ್: ಅಂಬೇಡ್ಕರ್​ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗಿ ಬಳಕೆ ಆಗುತ್ತಿರುವ ಅತೀ ದೊಡ್ಡ ಹೆಸರು. ಭಾರತದ ಬಹುಸಂಖ್ಯಾತರ ಮನಸಲ್ಲಿ ಅಚ್ಚಳಿಯದೇ ಉಳಿದಿರುವ ಬಾಬಾ ಸಾಹೇಬರ ಪರಿನಿಬ್ಬಾಣದ ದಿನವಾದ ಇಂದು ಇಡೀ ರಾಷ್ಟ್ರ ಅವರಿಗೆ ಗೌರವ ಸಲ್ಲಿಸುತ್ತಿದೆ.

ಪರಿನಿರ್ವಾಣ ಎಂದರೇನು?

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿಧನ ಹೊಂದಿದ ದಿನವಾದ ಡಿಸೆಂಬರ್‌ 6ನ್ನು ಮಹಾಪರಿನಿರ್ವಾಣ/ಪರಿನಿಬ್ಬಾಣ ದಿವಸವೆಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ 'ಪರಿನಿರ್ವಾಣ' ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು ಎಂಬ ಅರ್ಥವಿದೆ. ಬಾಬಾ ಸಾಹೇಬರು ತಾವು ತಮ್ಮ ಕೊನೆಯ ಜೀವಿತಾವಧಿಯಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಹೀಗಾಗಿ, ಪರಿನಿರ್ವಾಣ ದಿನ ಎಂದು ಕರೆಯಲಾಗುತ್ತದೆ.

ಗಣ್ಯರಿಂದ ಗೌರವ ಸಮರ್ಪಣೆ

ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿ ಎಂಬ ಹೊಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಮಾಜ ಸುಧಾರಕ, ಮಹಿಳಾ ಪರ ಹೋರಾಟಗಾರ.. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ತಮ್ಮ ಕೊಡುಗೆ ನೀಡಿದ್ದಾರೆ.

'ಅಸ್ಪೃಶ್ಯತೆ, ದುರ್ಬಲ ವರ್ಗಗಳ ವಿಮೋಚನೆ ಹೊರತು ಸ್ವಾತಂತ್ರ್ಯ ಅರ್ಥರಹಿತ'

ಭಾರತದ ದೀನದಲಿತರ ವಿಮೋಚನೆಗಾಗಿ ಅವರು ನಡೆಸಿದ ಹೋರಾಟವನ್ನು ದೇಶದ ಸ್ವಾತಂತ್ರ್ಯ ಹೋರಾಟದ ಅಂಗವಾಗಿಯೇ ಸಂಘಟಿಸಿ ಅಸ್ಪೃಶ್ಯತಾ ನಿವಾರಣೆ ಮತ್ತು ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ ಎಂದು ಪ್ರತಿಪಾದಿಸಿದ್ದರು. ಇಡೀ ಮಾನವ ಕುಲದ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಮಹಾನ್​ ನಾಯಕ ಅಂಬೇಡ್ಕರ್​, ಜಾತ್ಯತೀತ, ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು.

ಶೋಷಿತರ ಬದುಕಿಗೆ ಬೆಳಕಾದ ಅಂಬೇಡ್ಕರ್‌

ಬಹುಸಂಖ್ಯಾತರ ಮನೆಗಳಲ್ಲಿ ದೀಪ ಬೆಳಗುವಂತೆ ಮಾಡಿದ ಅಂಬೇಡ್ಕರ್ ನಮ್ಮನ್ನಗಲಿ ಹಲವು ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಅವರು ಎಲ್ಲಾ ರಂಗದಲ್ಲೂ ಪ್ರಸ್ತುತ. ಬಾಬಾ ಸಾಹೇಬರು ಬಾಲ್ಯದಲ್ಲಿಯೇ ಮೌಢ್ಯ, ಜಾತಿ ಶೋಷಣೆಯನ್ನು ಪ್ರಶ್ನಿಸುತ್ತಿದ್ದವರು. ಕಾಲಾನಂತರದಲ್ಲಿ ಇದು ಅವರ ಹೋರಾಟಕ್ಕೆ ನಾಂದಿಯಾಯಿತು. ಹಿಂದು ಧರ್ಮದ ಕೆಲವು ಮೌಢ್ಯ, ಸಂಪ್ರದಾಯಗಳನ್ನು ಬಹಿರಂಗವಾಗಿಯೇ ವಿರೋಧಿಸುತ್ತಿದ್ದರು. ವೈಚಾರಿಕ ದೃಷ್ಟಿಕೋನದಿಂದ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಹೆಚ್ಚು ಹೆಚ್ಚು ಸುಶಿಕ್ಷಿತರಾಗಿ, ವಿದ್ಯಾವಂತರಾದಂತೆ ಹಕ್ಕು ಮತ್ತು ಸಾಮಾಜಿಕ ಸಮಾನತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜನರನ್ನು ಹುರಿದುಂಬಿಸುತ್ತಿದ್ದರು. ಇದರ ಪರಿಣಾಮವೇ ಇಂದು ಹಲವಾರು ಶೋಷಿತ ಸಮಾಜ ಎಲ್ಲರಂತೆ ಸಮಾನತೆಯಿಂದ ಬದುಕಲು ಕಾರಣವಾಯಿತು.

ಬೌದ್ಧಧರ್ಮ ಅಪ್ಪಿಕೊಂಡ ಅಂಬೇಡ್ಕರ್‌

1935ರಲ್ಲಿ ನಡೆದ ದಲಿತ ಸಮ್ಮೇಳನದಲ್ಲಿ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೊಷಿಸಿದ್ದರು. ಇದಾದ ನಂತರ ಹಲವು ಧರ್ಮಗಳ ಧರ್ಮಾಧಿಕಾರಿಗಳು ತಮ್ಮ ಧರ್ಮಕ್ಕೆ ಸೇರಿಕೊಳ್ಳಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಭಾರತ ಪ್ರೇಮಿಯಾದ ಅಂಬೇಡ್ಕರ್​ ಭಾರತದಲ್ಲೇ ಹುಟ್ಟಿದ ಭೌದ್ಧಧರ್ಮವನ್ನು ಅಪ್ಪಿಕೊಂಡರು.

ಅದರಂತೆ 1956 ಅಕ್ಟೋಬರ್ 14 ರಂದು ಅಂಬೇಡ್ಕರ್​ ಅವರು ನಾಗಪುರದಲ್ಲಿ ಬುದ್ಧ ಭಿಕ್ಷುವಿನಿಂದ ಧಮ್ಮ ದೀಕ್ಷೆ ಸ್ವೀಕರಿಸಿದರು. ಅವರ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ 3,80,000 ಜನಸಮೂಹಕ್ಕೆ ತಾವೇ ಧಮ್ಮ ದೀಕ್ಷೆ ಬೋಧಿಸಿದರು.

ಗಣ್ಯರಿಂದ ಗೌರವ ನಮನ:

ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಸಂಸದರು ಇಂದು ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನದಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂಬಿರ್ಲಾ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸಂಸದರು ಸಂಸತ್ತಿನ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಭಾರತರತ್ನ ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸದಂದು ಅವರಿಗೆ ನಮನಗಳು ಎಂದು ಮೋದಿ ಟ್ವೀಟ್​ ಮಾಡಿದ್ದಾರೆ. ಹಾಗೆಯೇ, ಲಕ್ನೋದಲ್ಲಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಕೂಡ ಬಾಬಾಸಾಹೇಬರ ಫೋಟೋಗೆ ಪುಷ್ಪನಮನ ಸಲ್ಲಿಸಿದ್ದಾರೆ.

ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ನಿರ್ಲಕ್ಷಿತರ ಉನ್ನತಿಗಾಗಿ ಅಂಬೇಡ್ಕರ್​ ಹೋರಾಡಿದರು. ಕೇಂದ್ರ ಮತ್ತು ರಾಜ್ಯಗಳಲ್ಲಿನ ಜಾತಿವಾದಿ ಸರ್ಕಾರಗಳ ನಿರಾಸಕ್ತಿಯಿಂದಾಗಿ ಅವರು ರಚಿಸಿದ ಸಂವಿಧಾನದಲ್ಲಿ ಅವರಿಗೆ ನೀಡಲಾದ ಪ್ರಯೋಜನಗಳನ್ನು ಇಂದು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇದೇ ವೇಳೆ ಮಾಯಾವತಿ ಹೇಳಿದ್ದಾರೆ.

Last Updated : Dec 6, 2021, 10:42 AM IST

ABOUT THE AUTHOR

...view details