ಕಿಂಗ್‌ಸ್ಟನ್ (ಜಮೈಕಾ):ನಾಲ್ಕು ದಿನಗಳ ಜಮೈಕಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡೌನ್‌ಟೌನ್‌ನಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್ ಹೆಸರಿನ 'ಡಾ ಬಿ.ಆರ್.ಅಂಬೇಡ್ಕರ್ ಅವೆನ್ಯೂ' ರಸ್ತೆ ಉದ್ಘಾಟಿಸಿದರು. ಬಳಿಕ ಜಮೈಕಾದ ಗವರ್ನರ್ ಜನರಲ್ ಸರ್ ಪ್ಯಾಟ್ರಿಕ್ ಅಲೆನ್ ಅವರನ್ನು ಭೇಟಿ ಮಾಡಿದರು. ಐಟಿ ಮತ್ತು ಸಂಬಂಧಿತ ಸೇವೆಗಳು, ವೈದ್ಯಕೀಯ ಮತ್ತು ಫಾರ್ಮಾ ಕ್ಷೇತ್ರ, ಕ್ರೀಡೆ ಮತ್ತು ಶಿಕ್ಷಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಮತ್ತು ಅಭಿವೃದ್ಧಿ ಪಾಲುದಾರಿಕೆ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ರಾಷ್ಟ್ರಪತಿಗಳು ಜಮೈಕಾದ ರಾಷ್ಟ್ರೀಯ ವೀರ ಮಾರ್ಕಸ್ ಗಾರ್ವೆ ಅವರ ದೇಗುಲಕ್ಕೆ ಪುಷ್ಪಾರ್ಚನೆ ಮಾಡಿದರು. ಉಭಯ ದೇಶಗಳ ಭೇಟಿಯ ಮೊದಲ ಹಂತದಲ್ಲಿ ಇಲ್ಲಿಗೆ ಆಗಮಿಸಿರುವ ರಾಷ್ಟ್ರಪತಿ ಮೇ 18 ರವರೆಗೆ ಜಮೈಕಾದಲ್ಲಿ ಇರುತ್ತಾರೆ. ನಂತರ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡಿನ್ಸ್‌ಗೆ ಪ್ರಯಾಣಿಸಲಿದ್ದಾರೆ.
ಕ್ರಿಕೆಟ್ ಅಸೋಸಿಯೇಷನ್‌ಗೆ ಬ್ಯಾಟ್ ಗಿಫ್ಟ್:ರಾಷ್ಟ್ರಪತಿ ಕೋವಿಂದ್ ಅವರು ಎರಡು ರಾಷ್ಟ್ರಗಳ ನಡುವಿನ ಕ್ರಿಕೆಟ್ ಸಹಕಾರದ ಸಂಕೇತವಾಗಿ ಜಮೈಕಾ ಕ್ರಿಕೆಟ್ ಅಸೋಸಿಯೇಷನ್‌ಗೆ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ನೀಡಿದರು. ಜಮೈಕಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವಿಲ್ಫೋರ್ಡ್ ಬಿಲ್ಲಿ ಹೆವನ್ ಅವರು ಈ ಉಡುಗೊರೆಯನ್ನು ಸ್ವೀಕರಿಸಿದರು.