ಇಂದೋರ್ (ಮಧ್ಯಪ್ರದೇಶ) :ಸತತ 6ನೇ ಬಾರಿ ದೇಶದ 'ಅತ್ಯಂತ ಸ್ವಚ್ಛ ನಗರಿ' ಎಂಬ ಖ್ಯಾತಿ ಮಧ್ಯಪ್ರದೇಶದ ಇಂದೋರ್ ಪಾಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಶಸ್ತಿಯನ್ನು ಬುಧವಾರ ನೀಡಿದರು. ಗುಜರಾತ್‌ನ ಸೂರತ್ ನಗರ ದ್ವಿತೀಯ, ಉತ್ತರಪ್ರದೇಶದ ಆಗ್ರ ತೃತೀಯ ಸ್ಥಾನ ಪ್ರಶಸ್ತಿ ಪಡೆಯಿತು. 2023 ನೇ ಸಾಲಿನ ದೇಶದ ಸ್ಮಾರ್ಟ್ ಸಿಟಿ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ರಾಜ್ಯವಾರು ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ.
ಇಂದೋರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಮಟ್ಟದ ಭಾಗವಹಿಸುವಿಕೆ ಅತ್ಯಗತ್ಯ. ಇಂದೋರ್‌ನಂತಹ ನಗರಗಳಲ್ಲಿ ಜನರ ಸಹಭಾಗಿತ್ವವು ಸ್ವಚ್ಛ ಮತ್ತು ಹಸಿರು ನಗರವನ್ನು ಸಾಕಾರಗೊಳಿಸಿದೆ. ಎಲ್ಲಾ ನಗರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಖಾತ್ರಿ ಬೇಕಿದೆ. ಈ ಕುರಿತು ಸಂಘಟಿತ ಪ್ರಯತ್ನಗಳನ್ನು ನಡೆಯಬೇಕಿದೆ. ಈಗಾಗಲೇ ಹಲವಾರು ಪ್ರಯತ್ನಗಳೂ ಸಾಗಿವೆ ಎಂದು ಹೇಳಿದರು.
ಒಂದು ಅಂದಾಜಿನ ಪ್ರಕಾರ, 2047ರ ವೇಳೆಗೆ ದೇಶದ ಶೇ.50ಕ್ಕೂ ಹೆಚ್ಚು ಜನರು ನಗರಗಳಲ್ಲಿ ಮಾತ್ರ ವಾಸಿಸುತ್ತಾರೆ ಎಂದು ಹೇಳಲಾಗಿದೆ. ಆ ವೇಳೆಗೆ ದೇಶದ ಜಿಡಿಪಿಯ ಶೇ.80ಕ್ಕೂ ಹೆಚ್ಚು ನಗರಗಳಿಂದ ಬರಲಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಗರಗಳ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸಬೇಕಿದೆ ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು.