ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು - joint session of parliament

ಸಂಸತ್ತಿನ ಬಜೆಟ್​ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಸಾಧನೆ ಮತ್ತು ಗುರಿಗಳನ್ನು ಇದೇ ವೇಳೆ ಪ್ರಕಟಿಸಿದರು.

president-droupadi-murmu
ರಾಷ್ಟ್ರಪತಿ ದ್ರೌಪದಿ ಮುರ್ಮು

By

Published : Jan 31, 2023, 11:38 AM IST

Updated : Jan 31, 2023, 1:13 PM IST

ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ:ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್​ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನುದ್ದೇಶಿ ಭಾಷಣ ಮಾಡಿದರು. "2047 ರ ವೇಳೆಗೆ ನಾವು ಗತಕಾಲದ ಬುನಾದಿಯ ಮೇಲೆ ಆಧುನಿಕತೆಯ ಸುವರ್ಣ ಅಧ್ಯಾಯಗಳನ್ನು ಹೊಂದಿರುವ ಸಶಕ್ತ ರಾಷ್ಟ್ರವನ್ನಾಗಿ ನಿರ್ಮಿಸಬೇಕಾಗಿದೆ. ಆತ್ಮನಿರ್ಭರ್ ಮತ್ತು ಮಾನವೀಯ ನೆಲೆಯ ಮೇಲೆ ಸಮರ್ಥ ದೇಶವನ್ನು ಕಟ್ಟಬೇಕು" ಹೇಳಿದರು.

"ಬಡವರು, ಮಧ್ಯಮ ವರ್ಗ, ಯುವಕರು, ಮಹಿಳೆಯರೆನ್ನದೇ ಎಲ್ಲ ಸ್ತರದ ನಾಗರಿಕರು ಅಭಿವೃದ್ಧಿ ಹೊಂದಬೇಕು. ಯುವಕರು ಮತ್ತು ಮಹಿಳೆಯರು ಸಮಾಜಕ್ಕೆ ಮತ್ತು ದೇಶಕ್ಕೆ ದಾರಿ ತೋರಿಸುವ ಮುಂಚೂಣಿಯಲ್ಲಿರಬೇಕು. ಯುವಕರು ಅಭಿವೃದ್ಧಿಯ ವಿಷಯದಲ್ಲಿ ಎಲ್ಲರಿಗಿಂತಲೂ ಎರಡು ಹೆಜ್ಜೆ ಮುಂದೆ ಇರಬೇಕು" ಎಂದು ಹೇಳಿದರು.

"ಇಂದು, ದೇಶದಲ್ಲಿ ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವಿದೆ. ಅದು ದೊಡ್ಡ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಿದೆ. ದೇಶದ ಆತ್ಮಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದೆ. ಜಗತ್ತು ನಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ. ಭಾರತವು ಜಗತ್ತಿಗೇ ಪರಿಹಾರಗಳನ್ನು ನೀಡುವಷ್ಟು ಸಶಕ್ತವಾಗಿದೆ" ಎಂದು ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮನಿರ್ಭರ ಭಾರತ ಗುರಿ ಸಾಧಿಸಿ:"ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯದ ಅಮೃತ ಕಾಲ ಪ್ರವೇಶಿಸಿದೆ. ಈ ಸಮಯದಲ್ಲಿ ಜನರು ಆತ್ಮನಿರ್ಭರ್ (ಸ್ವಾವಲಂಬಿ) ಭಾರತವನ್ನು ನಿರ್ಮಿಸುವತ್ತ ಗಮನ ಕೇಂದ್ರೀಕರಿಸಬೇಕು. 2047 ರ ವೇಳೆಗೆ ದೇಶ ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಹೊಂದಿ ಸುವರ್ಣಯುಗ ಸ್ಥಾಪಿಸಬೇಕು. ಬಡತನವಿಲ್ಲದ ಮತ್ತು ಸಮೃದ್ಧಿಯಿಂದ ಕೂಡಿದ ಭಾರತ ನಮ್ಮದಾಗಬೇಕು" ಎಂದು ರಾಷ್ಟ್ರಪತಿ ಪ್ರತಿಪಾದಿಸಿದರು.

"ವಿಶ್ವ ವೇದಿಕೆಯಲ್ಲಿ ಭಾರತ ಬೆಳೆಯುತ್ತಿರುವ ಪರಿಯನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, ಸರ್ಕಾರದ ಹೊಸ ನೀತಿಗಳಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಾಮಗ್ರಿಗಳ ರಫ್ತು 6 ಪಟ್ಟು ಹೆಚ್ಚಾಗಿದೆ. ಐಎನ್‌ಎಸ್ ವಿಕ್ರಾಂತ್ ರೂಪದಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಕೂಡ ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಹೆಮ್ಮೆಯ ಸಂಗತಿಯಾಗಿದೆ" ಎಂದು ಮುರ್ಮು ಅವರು ಹೇಳಿದರು.

ಸರ್ಕಾರದಿಂದ ನಿರ್ಣಾಯಕ ಕ್ರಮಗಳು:"ಸರ್ಕಾರಕ್ಕೆ ದೇಶದ ಹಿತಾಸಕ್ತಿಯೇ ಪ್ರಮುಖವಾಗಿದೆ. ಅದರ ಹಳೆಯ ನೀತಿ, ತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸುವ ಇಚ್ಛೆಯನ್ನು ತೋರಿಸಿದೆ. ಸರ್ಜಿಕಲ್ ಸ್ಟ್ರೈಕ್‌ಗಳಿಂದ ಭಯೋತ್ಪಾದನೆ ವಿರುದ್ಧದ ಕಠಿಣ ನಿಗ್ರಹದವರೆಗೆ, ಎಲ್‌ಒಸಿಯಿಂದ ಎಲ್‌ಎಸಿವರೆಗೆ, ಆರ್ಟಿಕಲ್ 370 ರ ರದ್ದತಿಯಿಂದ ತ್ರಿವಳಿ ತಲಾಖ್‌ವರೆಗೆ, ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿರುವುದು ಹೆಗ್ಗುರುತಾಗಿದೆ" ಎಂದು ಬಣ್ಣಿಸಿದರು.

ಜಗತ್ತಿನ ಯಾವ ದೇಶದಲ್ಲಿ ರಾಜಕೀಯ ಅಸ್ಥಿರತೆ ಇದೆಯೋ, ಆ ದೇಶಗಳು ಬಿಕ್ಕಟ್ಟಿನಿಂದ ಕೂಡಿರುತ್ತವೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದಾಗಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ಮುರ್ಮು ಹೇಳಿದರು.

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಇಂದಿನಿಂದ ಫೆಬ್ರವರಿ 10 ರವರೆಗೆ ನಡೆಯಲಿದೆ. ಎರಡನೇ ಕಂತು ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದೆ.

ಇದನ್ನೂ ಓದಿ:ಇಂದಿನಿಂದ ಸಂಸತ್ತಿನ ಬಜೆಟ್​ ಅಧಿವೇಶನ: ರಾಷ್ಟ್ರಪತಿ ಭಾಷಣ, ಆರ್ಥಿಕ ಸಮೀಕ್ಷೆ ವರದಿ ಮಂಡನೆ

Last Updated : Jan 31, 2023, 1:13 PM IST

ABOUT THE AUTHOR

...view details