ನಾಗಪುರ:ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಆ ದಿನವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರಸಿದ್ಧ ಶೆಫ್ (ಬಾಣಸಿಗ) ವಿಷ್ಣು ಮನೋಹರ್ 2000 ಕಿಲೋಗ್ರಾಮ್ ಗರಿಗರಿಯಾದ ಚಿವಡಾ (ಅವಲಕ್ಕಿಯ ಖಾರದ ಸ್ನ್ಯಾಕ್ಸ್) ತಯಾರಿಸಲು ಸಜ್ಜಾಗಿದ್ದಾರೆ. ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿವಡಾ ತಯಾರಿಸುವ ಪ್ರಥಮ ಪ್ರಯತ್ನ ಇದಾಗಿರುವುದರಿಂದ ಇಡೀ ನಾಗಪುರ ಜನತೆಯ ಗಮನ ಸೆಳೆದಿದೆ. 2 ಸಾವಿರ ಕೆಜಿ ಚಿವಡಾ ತಯಾರಿಸುವ ಈ ಪ್ರಯತ್ನ ವಿಷ್ಣು ಮನೋಹರ್ ಅವರ 14ನೇ ವಿಶ್ವದಾಖಲೆಯಾಗಲಿದೆ.
ಕಾಂಚನ್ ಗಡ್ಕರಿ ಮತ್ತು ಅಮೃತಾ ಫಡ್ನವಿಸ್ ಈ ಚಿವಡಾವನ್ನು ಉಚಿತವಾಗಿ ವಿತರಿಸಲಿದ್ದಾರೆ. ಈ ಹಿಂದೆ ವಿಷ್ಣು ಮನೋಹರ್ ಗಣೇಶೋತ್ಸವ ಸಂದರ್ಭದಲ್ಲಿ 2500 ಕೆಜಿ ಒಣ ಬೇಳೆಕಾಳುಗಳಿಂದ ತಯಾರಿಸಲಾದ ಪ್ರಸಾದ ಹಂಚಿದ್ದರು.
ನಾಗಪುರ ನಗರದ ರಾಮದಾಸ್ಪೇಟ್ನ ವಿಷ್ಣುಜಿ ಕಿ ರಸೋಯಿಯಲ್ಲಿ 6000 ಕೆಜಿ ತೂಕದ ಬೃಹತ್ ಕಡಾಯಿಯಲ್ಲಿ ಚಿವಡಾ ತಯಾರಿಸಲಾಗುತ್ತದೆ. ದೀಪಾವಳಿ ಹಾಗೂ ವಿಶ್ವ ಆಹಾರ ದಿನದಂದು ಚಿವಡಾ ತಯಾರಿಸಲು ಶೆಫ್ ವಿಷ್ಣು ಮನೋಹರ್ ನಿರ್ಧರಿಸಿದ್ದಾರೆ. ಕುರುಕುರೇಯಾದ ಚಿವಡಾ ತಯಾರಿಸಲು ಮಧ್ಯಪ್ರದೇಶದ ಉಜ್ಜಯಿನಿಯಿಂದ 600 ಕೆಜಿ ಅವಲಕ್ಕಿ ತರಲಾಗುವುದು. ಇದಲ್ಲದೇ ಬಾದಾಮಿ ಹಾಗೂ ಗೋಡಂಬಿಗಳನ್ನು ಸಹ ಚಿವಡಾದಲ್ಲಿ ಸೇರಿಸಲಾಗುವುದು.