ನವದೆಹಲಿ: ಸುಧಾರಿತ ಆರೋಗ್ಯ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಕೊರೊನಾ ವೈರಸ್ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ದೇಶಾದ್ಯಂತ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ನಡುವೆ ಅಸ್ಸೋಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್ಗಳಲ್ಲಿ ಡಿಸೆಂಬರ್ 28 ಮತ್ತು 29 ರಂದು ಕೊರೊನಾ ಲಸಿಕೆ ನೀಡುವ ಪ್ರಾಯೋಗಿಕ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ. ಜನವರಿ 2ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಜನವರಿ ಎರಡರಿಂದ ಮೂರು ಸೆಷನ್ಗಳಲ್ಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ರಾಜಧಾನಿ ಅಷ್ಟೇ ಅಲ್ಲ ಕಳಪೆ ಲಾಜಿಸ್ಟಿಕ್ ಸೌಲಭ್ಯ ಇರುವ ಜಿಲ್ಲೆಗಳಲ್ಲೂ ಕೊರೊನಾ ಲಸಿಕೆ ನೀಡುವ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ಸಾಗಿಸಲು ಬೇಕಾದ ವಾಹನ, ಲಸಿಕೆ ಸಂಗ್ರಹಕ್ಕೆ ಬೇಕಾದ ಸೌಲಭ್ಯ ಹಾಗೂ ಕೋ - ವಿನ್ (co-Win )ಆ್ಯಪ್ ಮೂಲಕ ಅಗತ್ಯ ಡೇಟಾ ಸಂಗ್ರಹಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಉದಾಹರಣೆಗೆ ಗುಜರಾತ್ನಲ್ಲಿ ಸುಮಾರು 475 ಫಲಾನುಭವಿಗಳಿಗೆ ಡಮ್ಮಿಯಾಗಿ ಲಸಿಕೆ ಹಾಕಲು ಮಾಡಬೇಕಾದ ಕೆಲಸಕ್ಕೆ ಬೇಕಾದ ಪ್ರೊಸಿಜರ್ಗಳನ್ನ ಪಾಲನೆ ಮಾಡಲಾಗಿದೆ. ಲಸಿಕೆ ಹಾಕುವ ವೇಳೆ ಪಾಲಿಸಬೇಕಾದ ನಿಯಮಗಳು, ಸಾಮಾಜಿಕ ಅಂತರ, ಲಸಿಕಾ ಕೇಂದ್ರಗಳನ್ನು ಗುರುತಿಸುವ ಕೆಲಸವನ್ನ ಸಂಪೂರ್ಣಗೊಳಿಸಲಾಗಿದೆ.
ಗುಜರಾತ್‌ನ ಸುಮಾರು 19 ಲಸಿಕಾ ಬೂತ್ಗಳಲ್ಲಿ ವ್ಯಾಕ್ಸಿನೇಷನ್ ಹಾಕುವ ಪ್ರಾಯೋಗಿಕ ಪರೀಕ್ಷೆಗಳನ್ನ ಸಂಪೂರ್ಣಗೊಳಿಸಲಾಗಿದೆ. ಇನ್ನು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಸುಮಾರು 2 ದಿನಗಳ ಪರೀಕ್ಷಾರ್ಥ ಪ್ರಯೋಗ ಮಾಡಿದ್ದು, ಎಲ್ಲೆಡೆ ಸಕ್ಸಸ್ ಆಗಿದೆ.
ಈ ನಡುವೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಅಡಿಪಾಯ ಹಾಕಿ ಮಾತನಾಡಿದ ಮೋದಿ, 2020ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕಡೆಯಿಂದಲೂ ಪ್ರಶ್ನಾರ್ಥಕ ಚಿಹ್ನೆಗಳು ಇದ್ದವು. 2021ರೊಂದಿಗೆ ಕೋವಿಡ್ ಚಿಕಿತ್ಸೆವೆಯ ಭರವಸೆ ಕಂಡು ಬರುತ್ತಿದೆ ಎಂದರು.
ಸೋಂಕಿನ ವಿರುದ್ಧ ಭಾರತವು ಒಗ್ಗಟ್ಟಿನಿಂದ ಹೋರಾಡುತ್ತಿದೆ. ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಾರತ ಶ್ರಮಿಸುತ್ತದೆ. ಭಾರತವು ಯಾವುದೇ ಸಮಸ್ಯೆ ಎದುರಿಸಿದಾಗ, ಇಡೀ ರಾಷ್ಟ್ರವು ಪರಸ್ಪರ ಒಗ್ಗೂಡುತ್ತಿದೆ ಎಂದು ಪ್ರಧಾನಿ ಹೇಳಿದರು.
1.3 ಬಿಲಿಯನ್ ಜನಸಂಖ್ಯೆಯ ಹೊರತಾಗಿ ಸಾಂಕ್ರಾಮಿಕ ರೋಗದ ನಡುವೆಯೂ ಉತ್ತಮ ಸ್ಥಿತಿಯಲ್ಲಿ ಇರಲು ಜನರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕೋಟ್ಯಂತರ ಜನರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಇತರ ದೇಶಗಳಿಗಿಂತ ಭಾರತ ಉತ್ತಮವಾಗಿದೆ ಎಂದರು.
ಭಾರತದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 'ಆರೋಗ್ಯವು ಸಂಪತ್ತು' ಎಂಬುದು ಗಮನಸೆಳೆದಿದೆ. ಆರೋಗ್ಯದ ಮೇಲೆ ಯಾವುದೇ ದಾಳಿ ನಡೆದಾಗ, ಅದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇಡೀ ಸಮಾಜವು ಅದರ ಹಿಡಿತಕ್ಕೆ ಬರುತ್ತದೆ ಎಂದು ತಿಳಿಸಿದರು.