ದ್ರಾಸ್ (ಲಡಾಖ್): 1999ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ದಿನವನ್ನು ಪ್ರತಿ ವರ್ಷ ಜುಲೈ 26ರಂದು ರಾಷ್ಟ್ರ ಸ್ಮರಿಸುತ್ತಿದ್ದು, ಈ ಹಿನ್ನೆಲೆ ಲಡಾಖ್‌ನ ದ್ರಾಸ್‌ನಲ್ಲಿ 24ನೇ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಂಗಳವಾರ ಪ್ರಾರಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ಯುದ್ಧ ಸ್ಮಾರಕಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬುಧವಾರ ಬೆಳಗ್ಗೆ ಕಾರ್ಯಕ್ರಮ ನಡೆಯುವ ಲಡಾಖ್‌ಗೆ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಏತನ್ಮಧ್ಯೆ, ಇಂದು ಲಮೊಚೆನ್ ವ್ಯೂ ಪಾಯಿಂಟ್‌ನಲ್ಲಿ, ಭಾರತೀಯ ಸೇನೆಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಎತ್ತಿ ತೋರಿಸುವ ಯುದ್ಧಗಳ ಆಡಿಯೋ ಮತ್ತು ದೃಶ್ಯ ನಿರೂಪಣೆಯನ್ನು ಪ್ರದರ್ಶಿಸುವ ಬ್ರೀಫಿಂಗ್ ಅನ್ನು ನಡೆಸಲಾಗುವುದು. ಲಮೋಚನ್ ವ್ಯೂ ಪಾಯಿಂಟ್‌ನಿಂದ ಗಣ್ಯರಿಗೆ ಯುದ್ಧಭೂಮಿಯ ಪರಿಚಯದ ನಂತರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 'ಬಾರಾಖಾನಾ' ಒಳಗೊಂಡ 'ವಿಜಯ್ ಭೋಜ್' ಕಾರ್ಯಕ್ರಮವನ್ನು ಸ್ಯಾಂಡೋ ಹಿಂಭಾಗದಲ್ಲಿ ಆಯೋಜಿಸಲಾಗಿದೆ.
ಸೇನಾ ಪಡೆಯಿಂದ ದೇಶಭಕ್ತಿ ಗೀತೆಗಳ ಪ್ರದರ್ಶನ ಹಾಗೂ ಮಾರ್ಚ್ ಫಾಸ್ಟ್ ಕೂಡ ನಡೆಯಲಿದೆ. ನಂತರದಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳ ಮೂಲಕ ತಮ್ಮ ಜನಾಂಗದ ಶ್ರೀಮಂತಿಕೆಯನ್ನು ಪ್ರದರ್ಶಿಸಲಿದ್ದಾರೆ. ಭಾರತೀಯ ಸೇನೆಯ ಜೊತೆಗೆ ಸ್ಥಳೀಯ ಜನರ ಬದ್ಧತೆಯನ್ನು ಈ ಕಲಾವಿದರು ಸಾಬೀತುಪಡಿಸಲಿದ್ದು, ಆಪರೇಷನ್ ವಿಜಯ್ ಸಮಯದಲ್ಲಿ ವೀರರ ಕೊಡುಗೆಗಳನ್ನು ನೆನಪಿಸಿಕೊಳ್ಳಲಿದ್ದಾರೆ.